ಅಹಮದಾಬಾದ್, ಮೇ. 03: ದೇಶದಲ್ಲಿ ತಲ್ಲಣ ಸೃಷ್ಟಿಸಿರುವ ಕೊರೊನಾ ಆತಂಕ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೂ ವಕ್ಕರಿಸಿದ್ದು, ಕೊಲ್ಕತ್ತಾ ನೈಟ್‌ರೈಡರ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಿಸ್ಟ್ರೀ ಸ್ಪಿನ್ನರ್ ವರುಣ್ ಚಕ್ರವರ್ತಿ ಹಾಗೂ ಬೌಲರ್ ಸಂದೀಪ್ ವಾರಿಯರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ತಂಡದ ಸಹ ಆಟಗಾರರು ಹಾಗೂ ವ್ಯವಸ್ಥಾಪನ ಮಂಡಳಿಯಲ್ಲಿ ದೊಡ್ಡ ಆತಂಕ ಸೃಷ್ಟಿಸಿದೆ. ಕೆಲವು ದಿನಗಳ ಹಿಂದೆ ವರುಣ್ ಚಕ್ರವರ್ತಿ, ತಮ್ಮ ಭುಜದ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಸಲುವಾಗಿ ಬಯೋ ಬಬಲ್‌ನಿಂದ ಹೊರ ಹೋಗಿದ್ದರು.
ಈ ಸೀಸನ್ ಆರಂಭವಾದ ನಂತರದಲ್ಲಿ ಬಯೋ ಬಬಲ್‌ನಲ್ಲಿದ್ದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿಯಾದ ಮೊದಲ ಪ್ರಕರಣ ಇದಾಗಿದೆ. ಕೆಕೆಆರ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ.