ಅಮೆರಿಕದ ಹಡಗುಗಳೇ ಟಾರ್ಗೆಟ್; ಗಲ್ಫ್ ಆಫ್ ಓಮನ್‌ವರೆಗೂ (Iran Aggression in Hormuz) ನಿಷೇಧಿತ ವಲಯ ವಿಸ್ತರಿಸಿದ ಟೆಹ್ರಾನ್
ಹಾರ್ಮುಜ್ ಜಲಸಂಧಿ ಹೊರಗೂ ‘ನೋ-ಗೋ ಝೋನ್’ ವಿಸ್ತರಣೆ
ಅಮೆರಿಕದ ದಾಳಿಗೆ ಪ್ರತೀಕಾರದ ಸೂಚನೆ; ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 101.21 ಡಾಲರ್‌ಗೆ ಏರಿಕೆ
Tehran : ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ (Iran Aggression in Hormuz) ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತಷ್ಟು ತಾರಕಕ್ಕೇರಿದೆ.
ಜಲಸಂಧಿಯ ಮೂಲಕ ಸಂಚರಿಸಲು ಯತ್ನಿಸುತ್ತಿದ್ದ 20ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳ ಮೇಲೆ ಇರಾನ್ ಸೇನೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಇದರ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯ ಹೊರಭಾಗದಲ್ಲಿಯೂ ಸಂಚಾರ ನಿರ್ಬಂಧಿತ ‘ನೋ-ಗೋ ಝೋನ್’ ಅನ್ನು (No-go zone) ಇರಾನ್ ವಿಸ್ತರಿಸಿದ್ದು, ಮಧ್ಯಪ್ರಾಚ್ಯದ ಸಂಘರ್ಷ ಮತ್ತಷ್ಟು ಅಪಾಯಕಾರಿ ಹಂತ ತಲುಪಿದಂತಾಗಿದೆ.

ಈ ಬೆಳವಣಿಗೆಯ ನೇರ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯ (Iran Aggression in Hormuz) ಮೇಲೂ ಬಿದ್ದಿದ್ದು, ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ 101.21 ಡಾಲರ್‌ಗೆ ವಹಿವಾಟು ಮುಗಿಸಿದೆ.
ಇರಾನ್‌ನ ಕ್ರಾಂತಿಕಾರಿ ರಕ್ಷಣಾ ಪಡೆ ಬುಧವಾರ ನಡೆದ ದಾಳಿಗಳ ಕುರಿತು ಮಾಹಿತಿ ನೀಡಿದ್ದು, ಎರಡು ಅಮೆರಿಕದ ಹಡಗುಗಳು, ಎಂಟು ತೈಲ ಸಾಗಣೆ ಹಡಗುಗಳು
ಹಾಗೂ ಇರಾನ್ ನೀಡಿದ್ದ ಸೂಚನೆಗಳನ್ನು ಪಾಲಿಸದೆ ಮಾರ್ಗದಲ್ಲಿ ಸಂಚರಿಸುತ್ತಿದ್ದ 10 ಹಡಗುಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿದೆ.
ಗಲ್ಫ್ ಆಫ್ ಓಮನ್ (Gulf of Oman) ಮತ್ತು ಗಲ್ಫ್ ಪ್ರದೇಶದಲ್ಲಿ ಹಲವು ಹಡಗುಗಳು ಸೇನಾ ಚಟುವಟಿಕೆಗಳ ಭಾಗವಾಗಿ ಗುಂಡಿನ ದಾಳಿಗೆ ಒಳಗಾಗಿವೆ ಎಂದು
ಬ್ರಿಟನ್‌ನ ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ (United Kingdom Maritime Trade Operations) ಕೂಡ ತಿಳಿಸಿದೆ.
ಜಗತ್ತಿನ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗ ಸಾಮಾನ್ಯವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತದೆ. ಹೀಗಾಗಿ ಈ ಪ್ರಮುಖ
ಜಲಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಯಾದರೆ ಅದರ ಪರಿಣಾಮ ಕೇವಲ ಮಧ್ಯಪ್ರಾಚ್ಯಕ್ಕೆ ಸೀಮಿತವಾಗದೆ ಜಾಗತಿಕ ಇಂಧನ ಪೂರೈಕೆಯ ಮೇಲೂ ಬೀರುವ ಆತಂಕ ಎದುರಾಗಿದೆ.
ಇದರ ನಡುವೆ ಇರಾನ್ ತನ್ನ ‘ನಿಷೇಧಿತ ವಲಯ’ದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿರುವುದು ಪರಿಸ್ಥಿತಿಯನ್ನು ಗಂಭೀರಗೊಳಿಸಿದೆ. ಇದೇ ಮೊದಲ ಬಾರಿಗೆ ಗಲ್ಫ್ ಆಫ್
ಓಮನ್ ಹಾಗೂ ಅರಬ್ಬೀ ಸಮುದ್ರದ ಕೆಲವು ಭಾಗಗಳನ್ನೂ ಹೊಸ ‘ನೋ-ಗೋ ಝೋನ್’ ವ್ಯಾಪ್ತಿಗೆ ಸೇರಿಸಿರುವುದಾಗಿ ಇರಾನ್‌ನ ಕ್ರಾಂತಿಕಾರಿ ರಕ್ಷಣಾ ಪಡೆ ತಿಳಿಸಿದೆ.
ಈ ವಲಯದ ನಿಖರ ಭೌಗೋಳಿಕ ನಿರ್ದೇಶಾಂಕಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ಸಮನ್ವಯವಿಲ್ಲದೆ ಯಾವುದೇ ಹಡಗು ಈ ಪ್ರದೇಶ ಪ್ರವೇಶಿಸಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಡೆ ವಕ್ತಾರ ಹೊಸೈನ್ ಮೊಹೆಬಿ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದೆಡೆ, ಅಮೆರಿಕದ ಪಡೆಗಳು ಇರಾನ್‌ನ ತೈಲ ಸಾಗಣೆ ಹಡಗುಗಳ ವಿರುದ್ಧ ನಡೆಸಿದ ದಾಳಿಗೆ ಪ್ರತಿಯಾಗಿ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೂ
ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ. ಆದರೆ ಜೋರ್ಡಾನ್ ಸೇನೆ ತನ್ನತ್ತ ಉಡಾಯಿಸಲಾದ 18 ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವೂ ಇದೇ ವೇಳೆ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ಪಡೆಗಳು ಐದು ಇರಾನ್ ತೈಲ ಸಾಗಣೆ ಹಡಗುಗಳನ್ನು ನಾಶಪಡಿಸಿದ ಬಳಿಕ
ಇರಾನ್ ಪ್ರತಿಕ್ರಿಯೆ ಮತ್ತಷ್ಟು ಕಠಿಣಗೊಂಡಿದೆ. ಹಡಗುಗಳ ಸಿಬ್ಬಂದಿಗೆ ಹಡಗು ತೊರೆಯುವಂತೆ ಸೂಚಿಸಿದ ಬಳಿಕವೇ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೇನೆ ಹೇಳಿದೆ.
ಇರಾನ್ ಅಮೆರಿಕದ ನೌಕಾಪಡೆಗಳ ಮೇಲೆ ದಾಳಿ ನಡೆಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಆರೋಪಿಸಿದ್ದು, ಇಂತಹ ದಾಳಿ ನಡೆದಾಗಲೆಲ್ಲ ಇರಾನ್‌ನ ತೈಲ ಸಾಗಣೆ ಹಡಗುಗಳನ್ನು ಗುರಿಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಮುಗಿದ ಬಳಿಕ ಸಂಘರ್ಷ ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ.
ಆದರೆ ಅಮೆರಿಕದ ಕೆಲವು ಉನ್ನತ ಅಧಿಕಾರಿಗಳು ಯುದ್ಧ ಇನ್ನೂ ದೀರ್ಘಕಾಲ ಮುಂದುವರಿಯುವ ಸಾಧ್ಯತೆಯ ಬಗ್ಗೆ ಖಾಸಗಿಯಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಇರಾನ್‌ನ ಪರಮಾಣು ಚಟುವಟಿಕೆಗಳ ವಿಚಾರವೂ ಸಂಘರ್ಷಕ್ಕೆ ಹೊಸ ಆಯಾಮ ನೀಡಿದೆ. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಆಡಳಿತ ಮಂಡಳಿ, ಪರಮಾಣು ಒಪ್ಪಂದದ ನಿಯಮಗಳನ್ನು ಪಾಲಿಸದಿರುವ ಆರೋಪದ ಹಿನ್ನೆಲೆಯಲ್ಲಿ ಇರಾನ್ (Iran) ವಿರುದ್ಧದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಒಪ್ಪಿಸಲು ಮತ ಚಲಾಯಿಸಿದೆ. 23-3 ಮತಗಳಿಂದ ನಿರ್ಣಯ ಅಂಗೀಕಾರವಾಗಿದ್ದು, ಎಂಟು ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.
ರಷ್ಯಾ, ಚೀನಾ ಮತ್ತು ನೈಜರ್ ನಿರ್ಣಯವನ್ನು ವಿರೋಧಿಸಿವೆ. ಈ ನಿರ್ಣಯ ಅಮೆರಿಕದ ಒತ್ತಡದಿಂದ ಅಂಗೀಕಾರವಾಗಿದೆ ಎಂದು ಇರಾನ್ ಪ್ರತಿನಿಧಿ ಆರೋಪಿಸಿದ್ದಾರೆ.
ಇದೇ ವೇಳೆ, ಇರಾನ್ ಸರ್ಕಾರ ಶೀಘ್ರದಲ್ಲೇ ಕುಸಿಯಲಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪುನರುಚ್ಚರಿಸಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ನಿಯಂತ್ರಣದಿಂದಾಗಿ ಈ ಮಾರ್ಗದ ಹಡಗು ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ಸಂಚರಿಸುವ ಹಡಗುಗಳು ಇರಾನ್‌ನಿಂದ ಅನುಮತಿ ಪಡೆಯುವುದರ ಜೊತೆಗೆ ಸಾಗಣೆ ಶುಲ್ಕವನ್ನೂ ಪಾವತಿಸಬೇಕಾಗಿದೆ ಎಂದು ವರದಿಯಾಗಿದೆ.
ಹೀಗಾಗಿ ಹಾರ್ಮುಜ್ ಬಿಕ್ಕಟ್ಟು ಮುಂದುವರಿದರೆ ಜಾಗತಿಕ ತೈಲ ಬೆಲೆ, ಸಮುದ್ರ ವ್ಯಾಪಾರ ಮತ್ತು ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಗಳ ಮೇಲೆ ಮತ್ತಷ್ಟು ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ.
ಇದನ್ನು ಓದಿ : https://vijayatimes.com/ashoka-lashes-at-cauvery-issues/