ಮೈಸೂರು, ಜು. 05: ನಾಯಕತ್ವ ಬದಲಾವಣೆ ಬಗ್ಗೆ ಸಾಕಷ್ಟು ದೊಡ್ಡಮಟ್ಟದ ಚರ್ಚೆ ಹುಟ್ಟು ಹಾಕಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮತ್ತೊಮ್ಮೆ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಟ್ಟವರೊಂದಿಗೆ ಒಳ್ಳೆಯವರೂ ಸೇರಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ವಿಳಂಬ ಆಗುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರೊಂದಿಗೆ ಭೀಷ್ಮ, ದ್ರೋಣಾಚಾರ್ಯರಂತ ಒಳ್ಳೆಯವರೂ ಇದ್ದರು. ಕೆಲವು ಸಂದರ್ಭದಲ್ಲಿ ಹೀಗೆಲ್ಲ ಆಗುತ್ತೆ.
ಆದರೆ ಕೆಟ್ಟವರಿಗೆ ಕೊನೆಗಾಲ ಅಂತ ಇರುತ್ತೆ. ಅಲ್ಲಿವರೆಗೂ ಕಾಯೋಣ ಎಂದ ಅವರು, ಪಕ್ಷದ ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸಿಎಂ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಅನ್ ಲಾಕ್ ಹಿನ್ನೆಲೆ ಚಾಮುಂಡಿ ದೇವಿಯ ದರ್ಶನಕ್ಕೆ ಬಂದಿದ್ದೇನೆ. ದುಷ್ಟರ ಸಂಹಾರ ಮಾಡು ಅಂತ ತಾಯಿ ಬಳಿ ಬೇಡಿಕೊಂಡಿದ್ದೇನೆ. ಯಾರು ಅಪಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ, ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೋ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರು. ಅತಿ ಶೀಘ್ರದಲ್ಲೇ ದುಷ್ಟ ಸಂಹಾರ ಆಗುವ ವಿಶ್ವಾಸವೂ ಇದೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಸಿಎಂ ನಿವಾಸ ಕಾವೇರಿ ಹಿಂಭಾಗದಲ್ಲಿ ಗೆಸ್ಟ್ಗೌಸ್ ಇದೆ. ಇವರ ಎಲ್ಲ ಡೀಲ್ಗಳೂ ಅಲ್ಲೇ ನಡೆಯೋದು. ದಿನಕ್ಕೆ ನೂರು ಕೋಟಿ ರೂ. ಲೂಟಿ ಹೊಡೆಯುತ್ತಿದ್ದಾರೆ. ಹೀಗಿದ್ದರೂ
ಸಿಸಿಬಿ ಪೊಲೀಸರು ಅಲ್ಲಿಗೆ ಯಾಕೆ ರೈಡ್ ಮಾಡಲ್ಲ ಎಂದು ಪ್ರಶ್ನಿಸಿದರು.
ಮಠಾಧೀಶರುಗಳ ವಿರುದ್ಧವೂ ಹರಿಹಾಯ್ದ ಅವರು, ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲವು ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ. ಲವ್ ಜಿಹಾದ್ ತಡೆಯಲು ಮಠಾಧೀಶರು ಮುಂದಾಗಬೇಕು. ಕೆಟ್ಟವರಿಗೆ ಬುದ್ದಿ ಹೇಳುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಿಎಂ ಬದಲಾವಣೆ ಮಾಡಿದ್ರೆ ಬೀದಿಗೆ ಬರ್ತೀವಿ ಅನ್ನೋದು ಸರಿಯಲ್ಲ. ಮುಖ್ಯಮಂತ್ರಿ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ.
ಇದರ ಬಗ್ಗೆ ಮಾತನಾಡುವ ಬದಲು ಭ್ರಷ್ಟರ ಪರವಾಗಿ ಮಠಾಧೀಶರು ಮಾತನಾಡುತ್ತಿದ್ದು, ನಿಮಗೆ ಅಷ್ಟೊಂದು ರಾಜಕೀಯ ಹುಚ್ಚು ಇದ್ರೆ ಖಾವಿ ತೆಗೆದು ಖಾದಿ ಧರಿಸಿ ಬನ್ನಿ ಎಂದು ಸಿಎಂ ಪರ ಬ್ಯಾಟ್ ಬೀಸುತ್ತಿರುವ ಮಠಾಧೀಶರ ವಿರುದ್ದವೂ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದರು.