ಬೆಂಗಳೂರು : ದೇಶದ ಪ್ರಮುಖ ಔಷಧಿ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್(Micro Labs) ಮೇಲೆ ಆದಾಯ ತೆರಿಗೆ(Income Tax) ಇಲಾಖೆ ದಾಳಿ ನಡೆಸಿದೆ. ಬೆಂಗಳೂರಿನ(Bengaluru) ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್(Micro Labs) ಸಂಸ್ಥೆಯ ಕೇಂದ್ರ ಕಚೇರಿ ಮೇಲೆ ಐಟಿ ಅಧಿಕಾರಿಗಳು(IT Officers) ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಮೈಕ್ರೋ ಲ್ಯಾಬ್ಸ್ ಸಂಸ್ಥೆಯ ಡೈರೆಕ್ಟರ್ ಆನಂದ್ ಸುರಾನ, ಎಂಡಿ ದಿಲೀಪ್ ಸುರಾನಾ ನಿವಾಸದ ಮೇಲೆ ಮತ್ತು ಮುಂಬೈ, ದೆಹಲಿ, ಸಿಕ್ಕಿಂ, ತಮಿಳುನಾಡು, ಗೋವಾ, ಪಂಜಾಬ್ ಸೇರಿದಂತೆ ದೇಶದ ಒಟ್ಟು ೪೦ ಕಡೆ ಏಕಕಾಲಕ್ಕೆ ದಾಳಿ ನಡೆಲಾಗಿದೆ. ಈ ದಾಳಿಯಲ್ಲಿ ಸುಮಾರು ೨೦೦ಕ್ಕೂ ಅಧಿಕ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇನ್ನು ಮೈಕ್ರೋ ಲ್ಯಾಬ್ಸ್ ಸಂಸ್ಥೆ ಮುಖ್ಯವಾಗಿ ಡೋಲೋ 650 ಮಾತ್ರೆಯನ್ನು ಉತ್ಪಾದಿಸುತ್ತದೆ. ಕಳೆದ ಕೊರೋನಾ ವೇಳೆಯಲ್ಲಿ ಡೋಲೋ 650 ಮಾತ್ರೆಯ ಮಾರಾಟದಿಂದ ಸಂಸ್ಥೆಯೂ ಅಪಾರ ಆದಾಯ ಗಳಿಸಿದೆ.
ಡೋಲೋ 650 ಮಾತ್ರೆಗಳ ಮಾರಾಟದಿಂದಲೇ ಸಾವಿರಾರೂ ಕೋಟಿ ರೂ.ಗಳ ವ್ಯವಹಾರ ನಡೆಸಿದ್ದು, ಆ ವೇಳೆ ತೆರಿಗೆ ವಂಚಿಸಿದೆ ಎನ್ನಲಾಗಿದೆ. ಡೋಲೋ 650 ಮಾತ್ರೆಗಳನ್ನು ಮೈಕ್ರೋ ಲ್ಯಾಬ್ಸ್ ಸಂಸ್ಥೆಯೂ ಭಾರತ ಮಾತ್ರವಲ್ಲದೇ ವಿದೇಶಗಳಿಗೂ ರಫ್ತು ಮಾಡಿದೆ. ಆದರೆ ಆದಾಯ ತೆರಿಗೆ ಇಲಾಖೆಗೆ ನೀಡಿರುವ ಮಾಹಿತಿಯಲ್ಲಿ ತೆರಿಗೆ ವಂಚಿಸುವ ದೃಷ್ಟಿಯಿಂದ ಅನೇಕ ಮಹತ್ವದ ಅಂಶಗಳನ್ನು ಮುಚ್ಚಿಡಲಾಗಿದೆ. ಆ ಮೂಲಕ ತೆರಿಗೆ ವಂಚನೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಆರೋಪ ಮಾಡಿದೆ. ಮೈಕ್ರೋ ಲ್ಯಾಬ್ಸ್ ಸಂಸ್ಥೆಗೆ ಸೇರಿರುವ ಬಹುತೇಕ ಎಲ್ಲ ಕಚೇರಿಗಳ ಮೇಲೂ ದಾಳಿ ನಡೆದಿದ್ದು, ತನಿಖೆ ಮುಂದುವರೆದಿದೆ.