ಮಡಿಕೇರಿ, ಡಿ. 30: 12 ವರ್ಷಗಳ ಕಾಲ ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾ.ಪಂ ಗೆ ರಾಷ್ಟ್ರೀಯ ಪುರಸ್ಕಾರ ತಂದು ಕೊಟ್ಟಿದ್ದ, ಎಮ್ಮೆಗುಂಡಿ ಕ್ಷೇತ್ರದಿಂದ ಪುಲಿಯಂಡ ಬೋಪಣ್ಣ ಅವರು ಗೆಲುವು ಸಾಧಿಸಿದ್ದಾರೆ.
ಆದರೆ ಜಾತಿ ನಿಂದನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಯಾಗಿದ್ದ ಅವರು ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಎಲ್ಲರ ಗಮನ ಸೆಳೆದಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬೋಪಣ್ಣ 61 ಮತಗಳ ಅಂತರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯುಸೂಫ್ ಅವರನ್ನು ಸೋಲಿಸಿದ್ದಾರೆ.
ಕೊನೆಯ ಕ್ಷಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಅವರು ಉಳಿದಿದ್ದ ಎರಡು ದಿನಗಳ ಕಾಲ ಬಿರುಸಿನ ಪ್ರಚಾರ ನಡೆಸಿ ಪಾಲಿಬೆಟ್ಟ ಗ್ರಾ.ಪಂಗೆ ಮರು ಆಯ್ಕೆಯಾಗಿದ್ದಾರೆ.