ಬೆಂಗಳೂರು ನ 15 : ಮಾಜಿ ಸಚಿವ ಜನಾರ್ದನ ರೆಡ್ಡಿ ಅಸ್ವಸ್ಥರಾಗಿದ್ದಾರೆ. ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಅವರನ್ನ ನಗರದ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಆರೋಗ್ಯ ತಪಾಸಣೆ ನಂತರ ಆ್ಯಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಇತರ ತಪಾಸಣೆಗಳನ್ನು ಕೂಡ ನಡೆಸಿದ್ದಾರೆ. ಸದ್ಯ ಯಾವುದೇ ತೊಂದರೆ ಇಲ್ಲ, ಸಂಜೆ ವೇಳೆಗೆ ಆಸ್ಪತ್ರೆಯಿಂದ ಜನಾರ್ದನ ರೆಡ್ಡಿ ಅವರನ್ನು ಡಿಸ್ಟಾರ್ಜ್ ಮಾಡುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ರೆಡ್ಡಿ ಕುಟುಂಬ ಮೂಲಗಳು ತಿಳಿಸಿವೆ. ಜನಾರ್ದನ ರೆಡ್ಡಿ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಗಣಿ ಹಗರಣದ ಬಳಿಕ ಜನಾರ್ದನ ರೆಡ್ಡಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಪ್ರಸ್ತುತ ಅವರ ಆಪ್ತ ಶ್ರೀರಾಮುಲು ಸಾರಿಗೆ ಸಚಿವರಾಗಿದ್ದಾರೆ.
ಈ ಮಧ್ಯೆ ಹಳ್ಳಿ ಹಕ್ಕಿ ಖ್ಯಾತಿಯ ಬಿಜೆಪಿ ನಾಯಕ ಹಾಗೂ ಎಂ ಎಲ್ ಸಿ ಹೆಚ್ ವಿಶ್ವನಾಥ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.