ಗದಗ, ನ. 21: ಪಶು ಸಂಗೋಪನಾ ಹಾಗೂ ವಕ್ಫ್ ಸಚಿವ ಪ್ರಭು ಚವ್ಹಾಣ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಪಶುಸಂಗೋಪನೆ ಇಲಾಖೆಯಿಂದ ಸದ್ಯದಲ್ಲೇ ಆಂಬುಲೆನ್ಸ್ ಸೇವೆ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಸೇವೆ ಪ್ರಾರಂಭಿಸಲಾಗ್ತಿದ್ದು, ಈ ಮೂಲಕ ರೈತರ ಮನೆ ಬಾಗಿಲಿಗೆ ಪಶು ಆಸ್ಪತ್ರೆ ಬರಲಿದೆ. ಅತ್ಯಾಧ್ಯುನಿಕ, ಸುಸಜ್ಜಿತವಾದ ಈ ವಾಹನದಲ್ಲಿ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್,ತುರ್ತು ಚಿಕಿತ್ಸಾ ಘಟಕ, ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳು ಇರಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಗದಗ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ್ದು, ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ತುರ್ತು ಸಮಯದಲ್ಲಿ ಈ ಅಂಬುಲೆನ್ಸ್‌ಗಳು ಕಾರ್ಯನಿರ್ವಹಣೆ ಮಾಡುತ್ತಿದೆ. ಈ ಸೌಲಭ್ಯ ದಿನದ 24 ಗಂಟೆ ಲಭ್ಯವಾಗಲಿದ್ದು, ಟೋಲ್ ಫ್ರಿ ನಂಬರ್ ವ್ಯವಸ್ಥೆ ಸಹ ಮಾಡಲಾಗುತ್ತೆ.
ಅವಶ್ಯಕತೆ ಇದ್ದಲ್ಲಿ ಕರೆ ಮಾಡಿದ 4 ಗಂಟೆಯಲ್ಲಿ ಸೇವೆ ನೀಡಲು ಕ್ರಮ ಕೈಗೊಳ್ಳಲಾಗ್ತಿದ್ದು, ಕರೆ ಮಾಡಿದ ಮೊಬೈಲ್ ನಂಬರ್‌ಗೆ ಎಸ್‌ಎಂಎಸ್ ಮೂಲಕ ಮಾಹಿತಿ ಒದಗಿಸಲಾಗುತ್ತದೆ. ಸೇವೆ ಮತ್ತು ಕರೆಗಳ ಎಲ್ಲ ಮಾಹಿತಿ ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿ ಗಮನಕ್ಕೆ ತರುವ ವ್ಯವಸ್ಥೆ ಇದೆ. ವಾರ್ ರೂಮ್ ಮೂಲಕ ರೈತರಿಗೆ, ಪಶುಪಾಲಕರಿಗೆ, ಕೋಳಿ, ಕುರಿ, ಹಂದಿ ಸಾಕಾಣಿಕೆದಾರರಿಗೆ ಆರೋಗ್ಯ ಸಂಬಂಧಿ ವಿಷಯ, ಆಪ್ತಸಮಾಲೋಚನೆ ಮತ್ತು ಸಲಹೆ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದರು.