Visit Channel

ಜಾರಕಿಹೊಳಿ, ಮುಖ್ಯಮಂತ್ರಿ ನಡುವಿನ ಬಿರುಕು ಮತ್ತಷ್ಟು ಬಿಗಡಾಯಿಸಿದೆಯೇ?

bsy-ramesh-1608091977

ಬೆಂಗಳೂರು, ಡಿ.16: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಡುವಿನ ಬಿರುಕು ಮತ್ತಷ್ಟು ಬಿಗಡಾಯಿಸಿದೆಯೇ? ಇದಕ್ಕೆ ಪುಷ್ಟಿ ನೀಡುವಂತಹ ಬೆಳವಣಿಗೆಯೊಂದು ನಡೆದಿರುವುದು ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಮೇಶ್ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಅವರ ಇಲಾಖೆಗೆ ಸೇರಿದ ಕೆಲ ಮಹತ್ವದ ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೇ ಅನುಮೋದನೆ ನೀಡಿದ್ದಾರೆ.

ಜಾರಕಿಹೊಳಿ ರಾಜಕೀಯ ವೇಗಕ್ಕೆ ಕಡಿವಾಣ ಹಾಕಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಸಂದೇಶ ರವಾನಿಸುವ ಸಲುವಾಗಿಯೇ ಆ ಕೆಲಸ ನಿರ್ವಹಿಸಿದರಾ ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿರುವುದಂತು ಖಚಿತ. ಜಲ ಸಂಪನ್ಮೂಲ ಇಲಾಖೆ ಅಧೀನದಲ್ಲಿ ಬರುವ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ನಿರ್ದೇಶಕರ ಮಂಡಳಿಯ 16 ನೇ ಸಭೆಯನ್ನು ಮುಖ್ಯಮಂತ್ರಿಗಳು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದರು.

ಈ ಜಲ ನಿಗಮಕ್ಕೆ ಅಧ್ಯಕ್ಷರು ಮುಖ್ಯಮಂತ್ರಿಗಳಾಗಿದ್ದರೆ, ಸಚಿವರಾದ ರಮೇಶ ಜಾರಕಿಹೊಳಿ ಉಪಾಧ್ಯಕ್ಷರು. ನಿರ್ದೇಶಕ ಮಂಡಳಿ ಸಭೆಯಲ್ಲಿ ಅಧ್ಯಕ್ಷರ ಜತೆಗೆ ಎಲ್ಲಾ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು ಪಾಲ್ಗೊಂಡಿದ್ದರು. ಉಪಾಧ್ಯಕ್ಷ ರಮೇಶ್ ಜಾರಕಿಹೊಳಿ ಪಾಲ್ಗೊಂಡಿರಲಿಲ್ಲ.

ಜಲ ಸಂಪನ್ಮೂಲ ಇಲಾಖೆಯ ಭಾಗವಾಗಿರುವ ವಿಶ್ವೇಶ್ವರಯ್ಯ ಜಲ ನಿಗಮದ ಉಪಾಧ್ಯಕ್ಷರೇ ನಿರ್ದೇಶಕರ ಸಭೆಯಲ್ಲಿ ಪಾಲ್ಗೊಳ್ಳದಿರುವುದು ಅಚ್ಚರಿ ಮೂಡಿಸಿತ್ತು. ಅನುಪಸ್ಥಿತ ಅಧಿಕಾರಿಗಳಾದ ಶಾಲಿನಿ ರಜನೀಶ್, ಆರ್. ಚೆಲುವ ರಾಜು ಹೆಸರನ್ನು ಸಭೆಯಲ್ಲಿ ಉಲ್ಲೇಖಿಸಲಾಗಿತ್ತು.

ಉಪಾಧ್ಯಕ್ಷ ರಮೇಶ್ ಜಾರಕಿಹೊಳಿ ಗೈರು ಹಾಜರಾಗಿದ್ದರೂ ಸಹ ಅವರ ಅನುಪಸ್ಥಿತಿ ಬಗ್ಗೆ ಉಲ್ಲೇಖಿಸದೇ ಸಭೆ ನಡೆಸಲಾಗಿದೆ. ಮಾತ್ರವಲ್ಲ ವಿಶ್ವೇಶ್ವರಯ್ಯ ಜಲ ನಿಗಮದ ಕೋಟ್ಯಂತರ ರೂಪಾಯಿ ಕಾಮಗಾರಿಗಳಿಗೆ ಸಭೆ ಅನುಮೋದನೆ ನೀಡಿದೆ. ರಮೇಶ್ ಜಾರಕಿಹೊಳಿ ಅನುಪಸ್ಥಿತಿಯಲ್ಲಿ ಅವರದ್ದೇ ಇಲಾಖೆಯ ನಿಗಮದ ಸಭೆ ನಡೆಸಿ ಕಾಮಗಾರಿಗಳಿಗೆ ಅನುಮೋದನೆ ನೀಡಿರುವುದು ಚರ್ಚೆಗೆ ನಾಂದಿ ಹಾಡಿದೆ.

ಬಿಎಸ್‍ವೈ ಹೆಸರು-ಜಾರಕಿಹೊಳಿ ಶ್ರಮ: ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ಕೊಡಿಸಲು ಹದಿನೈದು ವರ್ಷದಿಂದ ಪ್ರಯತ್ನಿಸಲಾಗುತ್ತಿದೆ. ಆದರೆ, ಈವರೆಗೂ ಯಾವ ಸಚಿವರಿಂದಲೂ ಅದು ಸಾಧ್ಯವಾಗಿರಲಿಲ್ಲ. ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾದ ಬಳಿಕ ಪದೇ ಪದೇ ದೆಹಲಿಗೆ ಹೋಗಿ ಕೇಂದ್ರದ ನಾಯಕರ ಮೇಲೆ ಒತ್ತಡ ಹಾಕಿದ್ದರು. ಜಾರಕಿಹೊಳಿ ಅವರ ಒತ್ತಡಕ್ಕೆ ಮಣಿದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಭದ್ರಾ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡಲು ಸಮ್ಮತಿ ಸೂಚಿಸಿದ್ದಾರೆ.

ಇನ್ನೇನಿದ್ದರೂ ರಾಜ್ಯ ಸರ್ಕಾರ ಪ್ರಸ್ತಾವನೆಗೆ ಅನುಮೋದನೆ ನೀಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವ ಹಂತದಲ್ಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ದೊರತಲ್ಲಿ ಕೇಂದ್ರದಿಂದಲೇ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಅನುದಾನ ದೊರೆಯಲಿದೆ.

ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಚಿವ ಸಂಪುಟದ ಅನುಮೋದನೆ ಪಡೆಯುವ ತೀರ್ಮಾನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೆಗೆದುಕೊಂಡಿದ್ದಾರೆ. ಜಾರಕಿಹೊಳಿ ಅನುಪಸ್ಥಿತಿಯಲ್ಲಿ ಈ ತೀರ್ಮಾನ ತೆಗೆದುಕೊಂಡಿರುವುದು ಹಲವಾರು ಪ್ರಶ್ನೆ ಹುಟ್ಟುಹಾಕಿದೆ. ರಮೇಶ್ ಜಾರಕಿಹೊಳಿ ಅವರ ಪ್ರಾಮಾಣಿಕ ಪ್ರಯತ್ನದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ಸಿಗುತ್ತಿದ್ದು, ಯಡಿಯೂರಪ್ಪ ಅವರು ಅದನ್ನು ಹೈಜಾಕ್ ಮಾಡಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಜಲ ಸಂಪನ್ಮೂಲ ಸಚಿವರನ್ನು ದೂರ ಇಟ್ಟು ಇಂತಹ ತೀರ್ಮಾನ ತೆಗೆದುಕೊಂಡಿರುವುದು ಎಷ್ಟು ಸರಿ? ಜಲ ಸಂಪನ್ಮೂಲ ಸಚಿವರೇ ಇಲ್ಲದೇ ಅಂತಹ ಮಹತ್ವದ ತೀರ್ಮಾನ ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ಉದ್ದೇಶವೇನು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಆಪರೇಷನ್ ಕಮಲ ಪಾಳಯದ ನಾಯಕರಾಗಿದ್ದ ಜಾರಕಿಹೊಳಿ ಆರಂಭದಲ್ಲಿ ಮುಖ್ಯಮಂತ್ರಿಗಳಿಗೆ ಕಂಕಳ ಕೂಸು ಆಗಿದ್ದರು. ದಿನಗಳು ಕಳೆದಂತೆ ಜಾರಕಿಹೊಳಿ ಕೇಂದ್ರ ನಾಯಕರಿಗೆ ಸಮೀಪವಾಗತೊಡಗಿದ್ದೇ, ಬಿಎಸ್ ವೈ ಆಪ್ತತೆಗೆ ಅಂತರ ಸೃಷ್ಟಿ ಮಾಡಿತ್ತು. ಇದೀಗ ಸರ್ಕಾರದ ತೀರ್ಮಾನಗಳಲ್ಲೇ ಅದು ಗೋಚರವಾಗುತ್ತಿದೆ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.