- ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ ಕತೆ ಮುಗೀತಾ?
- ಜೆಡಿಎಸ್ ಬರೀ ಅಪ್ಪ ಮಕ್ಕಳ ಪಕ್ಷವಾಗಿ ಉಳಿಯುತ್ತಾ?
- ಕರ್ನಾಟಕದ ರಾಜಕೀಯದಲ್ಲಿ ಜೆಡಿಎಸ್‌ಗಿಲ್ವಾ ಭವಿಷ್ಯ?
ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಅದ್ರದ್ದೇ ಆದ ಒಂದು ಖದರ್ ಇತ್ತು. ಜನಮಾನಸದಲ್ಲಿ ಅದ್ರದ್ದೇ ಆದ ಸ್ಥಾನಮಾನ ಇತ್ತು. ಕರ್ನಾಟಕದ ರಾಜಕೀಯ ಕ್ಷೇತ್ರಕ್ಕೆ ಅನೇಕ ದಿಗ್ಗಜ, ಜನಪ್ರಿಯ ನಾಯಕರನ್ನು ಕೊಟ್ಟ ಪಕ್ಷ ಜೆಡಿಎಸ್. ಕನ್ನಡಿಗರ ವಿಶ್ವಾಸಗಳಿಸಿ ಅವರ, ರೈತ ಪರ ಚಿಂತನೆಯಿಂದ ತನ್ನದೇ ಬಲದಲ್ಲಿ ಸರ್ಕಾರ ರಚಿಸುವ ತಾಕತ್ತು ಇದ್ದ ಕರುನಾಡಿನ ಪ್ರಾದೇಶಿಕ ಪಕ್ಷ ಅಂದ್ರೆ ಅದು ಜೆಡಿಎಸ್ ಆಗಿತ್ತು. ಆದ್ರೆ ನಿಧಾನಕ್ಕೆ ತನ್ನ ಪ್ರಾಬಲ್ಯ ಕಳೆದುಕೊಂಡ ಜೆಡಿಎಸ್, ಸರ್ಕಾರ ರಚನೆ ವೇಳೆ ಪ್ರಮುಖ ಪಾತ್ರ ವಹಿಸಲಾರಂಭಿಸಿತು. ಯಾರಿಗೂ ಬಹುಮತ ಇಲ್ಲದಾಗ ಸರ್ಕಾರ ರಚನೆಗೆ ಜೆಡಿಎಸ್ ಪಾದವೇ ಗತಿ ಅನ್ನುವ ಕಾಲವೊಂದಿತ್ತು.

ಆದ್ರೆ ಕಾಲ ಬದಲಾಗುತ್ತಿದೆ. ದಳದ ಒಂದೊಂದೇ ದಳಗಳು ಉದುರುತ್ತಿವೆ. ದಳದ ನಾಯಕರು ಒಬ್ಬೊಬ್ಬರಾಗಿಯೇ ಪಕ್ಷ ತೊರೆದು ಹೋಗುತ್ತಿರುವ ಬೆಳವಣಿಗೆಯನ್ನು ನೋಡಿದ್ರೆ ಮುಂಬರುವ ವಿಧಾನಸಭಾ ಚುನಾವಣೆಯ ವೇಳೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗೋ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬರಬರುತ್ತಾ ರಾಜ್ಯದಲ್ಲಿ ಜೆಡಿಎಸ್ ಅಲೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಇದಕ್ಕೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ. ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶವನ್ನು ನೋಡೋದಾದ್ರೆ ಜೆಡಿಎಸ್ 3ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದೆ.
ಜೆಡಿಎಸ್‌ನ ಅಸ್ತಿತ್ವಕ್ಕೆ ದೊಡ್ಡ ಪೆಟ್ಟು ಬೀಳುತ್ತಿರೋದೇ ನಾಯಕರ ವಲಸೆ. ಜೆಡಿಎಸ್ ಪಕ್ಷಕ್ಕೆ ಕೈಕೊಟ್ಟು ಒಬ್ಬೋಬ್ಬರೇ ನಾಯಕರು ಬೇರೆ ಪಕ್ಷ ಸೇರುತ್ತಿದ್ದಾರೆ. ಜೆಡಿಎಸ್‌ನಲ್ಲಿ ನಾಯಕರ ರಾಜೀನಾಮೆ ಪರ್ವವೇ ಪ್ರಾರಂಭವಾಗಿದೆ ಅಂದ್ರೆ ತಪ್ಪಾಗಲಾರದು. ಇದು ಪಕ್ಷಕ್ಕೆ ಭಾರೀ ಹೊಡೆತ ಕೊಡಲಿದೆ. ಈ ಹಿಂದೆ ಸಿದ್ದರಾಮಯ್ಯ ಅವರಿಂದ ಪ್ರಾರಂಭವಾಗಿ ದೊಡ್ಡ ದೊಡ್ಡ ನಾಯಕರೇ ಪಕ್ಷಕ್ಕೆ ಗುಡ್‌ಬೈ ಅಂದಿದ್ರು. ಆದ್ರೂ ಜೆಡಿಎಸ್ ಒಂದಿಷ್ಟು ಬಲವನ್ನು ಉಳಿಸಿಕೊಂಡಿತ್ತು, ಆದ್ರೆ ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ತನ್ನೆಲ್ಲಾ ಪ್ರಮುಖ ನಾಯಕರನ್ನು ಕಳೆದುಕೊಳ್ಳುತ್ತಿದೆ. ಅದ್ರಲ್ಲೂ ಪಕ್ಷಕ್ಕೆ ನಿಷ್ಠರಾಗಿದ್ದವರು ಪಕ್ಷ ತೊರೆದು ಹೋಗುತ್ತಿರುವುದು ಪಕ್ಷದ ಅಸ್ತಿತ್ವಕ್ಕೇ ಕುತ್ತು ತರುತ್ತಿದೆ. ಇನ್ನೂ ಒಂದಷ್ಟು ಪ್ರಮುಖ ನಾಯಕರು ಜೆಡಿಎಸ್ ತೊರೆಯಲು ಸಿದ್ಧರಾಗಿದ್ದಾರೆ ಅನ್ನೋ ಮಾತು ಗುಟ್ಟಾಗಿ ಉಳಿದಿಲ್ಲ. ಅದು ಜಿ.ಟಿ ದೇವೇಗೌಡ, ಗುಬ್ಬಿ ವಾಸು, ಕೋಲಾರದ ಶ್ರೀನಿವಾಸ ಗೌಡ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಹೀಗೆ ನಾಯಕರು ಪಕ್ಷ ತೊರೆದರೆ ಮುಂದೆ ಜೆಡಿಎಸ್ ಬರೀ ಅಪ್ಪ ಮಕ್ಕಳ ಪಕ್ಷವಾಗಿ ಮಾತ್ರ ಉಳಿಯುತ್ತಾ ಅನ್ನೋ ಆತಂಕ ಜೆಡಿಎಸ್ ಬೆಂಬಲಿಗರಲ್ಲಿದೆ.
ಜೆಡಿಎಸ್ ಎಡವಿದ್ದೆಲ್ಲಿ? : ಜೆಡಿಎಸ್ ರಾಜ್ಯದ ಮಟ್ಟಿಗೆ ಪ್ರಮುಖ ರಾಜಕೀಯ ಪಕ್ಷ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೆಡಿಎಸ್‌ನ ಹಿಂದಿನ ಸಾಧನೆಗಳನ್ನು ಗಮನಿಸುವುದಾದರೆ 2004ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಾಕಷ್ಟು ವರ್ಷಗಳ ಬಳಿಕ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸರಿಸಮಾನವಾಗಿ ನಿಂತ ಜೆಡಿಎಸ್ 58 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಯಿತು. 2004ರ ಚುನಾವಣೆಯಲ್ಲಿ ಕಾಂಗ್ರೆಸ್ 65 ಸ್ಥಾನ ಗೆದ್ದರೆ, ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ 58 ಸ್ಥಾನಗಳನ್ನು ಗೆಲ್ಲಲು ಸಫಲವಾಯಿತು. ಆ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಅಂದರೆ 79 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಜೆಡಿಎಸ್ ಕಾಂಗ್ರೆಸ್ನೊಂದಿಗೆ ಸರ್ಕಾರ ರಚಿಸುವ ತೀರ್ಮಾನಕ್ಕೆ ಬಂದಿತು, ಅದರಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಧರ್ಮಸಿಂಗ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚನೆ ಮಾಡಲಾಯಿತು. ಜೆಡಿಎಸ್‌ನ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾದರು. ಆದರೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸರಿಬಾರದ ಹಿನ್ನೆಲೆಯಲ್ಲಿ ಜನತಾದಳ 2 ವರ್ಷಕ್ಕೂ ಮುಂಚೆಯೇ ತನ್ನ ದೋಸ್ತಿಯನ್ನು ಕೊನೆಗೊಳಿಸಿ ಬಿಜೆಪಿ ಜೊತೆ 20-20 ಸರ್ಕಾರ ರಚನೆ ಮಾಡಿತು. ಆದರೆ ಜೆಡಿಎಸ್ ಮೊದಲ 20ತಿಂಗಳ ಅಧಿಕಾರ ನಡೆಸಿ ನಂತರ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೆ ಕೊನೆಗೆ ಬಿಜೆಪಿ ಜೊತೆ ಕೂಡ ಮೈತ್ರಿಯನ್ನು ಮುರಿದುಕೊಂಡಿತು. 2004ರ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿದ್ದ ಮತದಾರರು ಕುಮಾರಸ್ವಾಮಿ ಅವರ ರಾಜಕೀಯದ ವರ್ತನೆಗೆ ( ಬಿಜೆಪಿ ಮತ್ತು ಕಾಂಗ್ರೆಸ್ಗೆ ಮೋಸ ಮಾಡಿದ್ದ ಪರಿಣಾಮ ) ಬೇಸತ್ತು 2008 ರಲ್ಲಿ ಮತದಾರ ಪ್ರಾದೇಶಿಕ ಪಕ್ಷಕ್ಕೆ ಸರಿಯಾದ ರೀತಿಯಲ್ಲೇ ಪಾಠ ಕಲಿಸಿ 2004ರಲ್ಲಿ 58 ಸ್ಥಾನ ಪಡಿದಿದ್ದ ಜೆಡಿಎಎಸ್ ಅನ್ನು 2008ರ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನಕ್ಕೆ ತಂದು ನಿಲ್ಲಿಸಿದರು. 2008ರ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ 30 ಸ್ಥಾನಗಳನ್ನು ಕಳೆದುಕೊಂಡು ತನ್ನ ಅಸ್ತಿತ್ವದ ಅಧಃ ಪತನಕ್ಕೆ ಮೊದಲ ಹೆಜ್ಜೆ ಇಟ್ಟಿತ್ತು. ಆದರೂ ಛಲಬಿಡದೆ ಹೆಚ್.ಡಿ. ಕುಮಾರಸ್ವಾಮಿ ರಾಜ್ಯಾದ್ಯಂತ ಪಕ್ಷವನ್ನು ಮೇಲೆತ್ತಲು ಎಡಬಿಡದೆ ಪ್ರಯತ್ನಪಟ್ಟು ರಾಜ್ಯಾದ್ಯಂತ ಸಂಚರಿಸಿ 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 40 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿತ್ತು. ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲೂ ಕೂಡ 37 ಸ್ಥಾನಗಳನ್ನು ಗೆದ್ದು ಪ್ರಮುಖ ಪಕ್ಷವಾಗಿ ರಾಜ್ಯದಲ್ಲಿ ಗುರುತಿಸಿಕೊಂಡಿತ್ತು. ಆದರೆ ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲೀ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಕೂಡ ಜೆಡಿಎಸ್ 4ನೇ ಸ್ಥಾನಕ್ಕೆ ಕುಸಿದು ರಾಜ್ಯದಲ್ಲಿ ಜೆಡಿಎಸ್ ಎಂಬ ಪಕ್ಷ ಅಸ್ತಿತ್ವವೇ ಇಲ್ಲ ಎಂಬ ಹಂತಕ್ಕೆ ಬಂದು ತಲುಪಿರುವುದಂತೂ ನಿಜ
ಜೆಡಿಎಸ್ ಅಧಃ ಪತನಕ್ಕೆ ಕಾರಣಗಳೇನು ?
ರಾಜ್ಯಾದ್ಯಂತ ರಾಜ್ಯದ ರೈತರ ಪರವಾಗಿರುವ ಏಕೈಕ ಪ್ರಾದೇಶಿಕ ಪಕ್ಷ ಎಂಬ ನಂಬಿಕೆ ಗಳಿಸಿದ್ದ ಪಕ್ಷ ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ ಇದಕ್ಕೆ ಕಾರಣಗಳನ್ನು ನೋಡುವುದಾದರೆ
- ಕುಟುಂಬ ರಾಜಕಾರಣ : ಜೆಡಿಎಸ್ ತನ್ನ ಕಾರ್ಯಕರ್ತರನ್ನು ಬೆಳೆಸದೇ ಕೇವಲ ತನ್ನ ಕುಟುಂಬವನ್ನೇ ರಾಜಕೀಯದಲ್ಲಿ ಬೆಳೆಸಲು ಮುಂದಾಗಿದ್ದು, ರಾಜ್ಯದಲ್ಲಿ ಜೆಡಿಎಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ
- ಅಸಂಬದ್ದ ಹೇಳಿಕೆಗಳು : ಕುಮಾರಸ್ವಾಮಿ ಒಬ್ಬ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದರೂ ಕೂಡ ಕೆಲವೊಮ್ಮೆ ಅರ್ಥವಿಲ್ಲದ ಹಾಗೂ ಅಸಂಬದ್ದ ಹೇಳಿಕೆಗಳಿಂದ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ.
- ಮುಸ್ಲಿಂರ ಅತಿಯಾದ ಓಲೈಕೆ : ಇತ್ತೀಚಿನ ದಿನಗಳಲ್ಲಿ ಮಾಜಿ ಸಿಎಂ ಹೆಚ್ಡಿಕೆ ಮುಸ್ಲಿಂರ ಓಲೈಕೆಗೆ ಮುಂದಾಗಿದ್ದು ಇದು ರಾಜ್ಯದ ಹಿಂದೂಗಳ ಭಾವನೆಗೆ ಎಲ್ಲೋ ಒಂದುಕಡೆ ಧಕ್ಕೆ ಉಂಟಾದಂತೆ ಆಗಿದ್ದು, ಹೀಗಾಗಿ ಹಲವು ಹಿಂದೂಗಳುಅದರಲ್ಲೂ ಮುಖ್ಯವಾಗಿ ಒಕ್ಕಲಿಗರು ಜೆಡಿಎಸ್ ನಿಂದ ದೂರಾಗಿರುವುದು ಜೆಡಿಎಸ್ಗೆ ಬಹು ದೊಡ್ಡ ಹೊಡೆತ ಬಿದ್ದಂತಾಗಿದೆ.
- ನಿಖರತೆ ಇಲ್ಲ : ರಾಜ್ಯದಲ್ಲಿ 2 ಬಾರಿ ಸಮ್ಮಿಶ್ರ ಸರ್ಕಾರದ ಹೆಸರಲ್ಲಿ ಅಧಿಕಾರ ಪಡೆದರೂ ಕೂಡ ಯಾವ ಪಕ್ಷದ ಜೊತೆಯೂ ಸರಿಯಾಗಿ ಆಡಳಿತ ನಡೆಸದ ಕಾರಣ ಜನರಿಗೆ ಜೆಡಿಎಸ್ ಮೇಲಿದ್ದ ವಿಶ್ವಾಸ ಹೋಗಲು ಇದೂ ಕೂಡ ಬಹುದೊಡ್ಡ ಕಾರಣವಾಗಿದೆ. ಅಲ್ಲದೆ ಜೆಡಿಎಸ್ ಬಿಜೆಪಿಯ ಬಿ ಟೀಂ ಅನ್ನೋ ಹೆಸರನ್ನು ಪಡೆದಿರೋದು ಈ ಪಕ್ಷಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.
- ಸಿದ್ದರಾಮಯ್ಯ ಹೊರ ನಡೆದಿದ್ದು : ಒಂದು ಕಾಲದಲ್ಲಿ ಜೆಡಿಎಸ್‌ನಲ್ಲಿ ಪ್ರಬಲವಾಗಿ ನೆಲೆಯೂರಿದ್ದ ಸಿದ್ದರಾಮಯ್ಯ ಜೆಡಿಎಸ್‌ನಿಂದಲೇ ಉಪ ಮುಖ್ಯಮಂತ್ರಿಕೂಡ ಆಗಿದ್ದರು. ಆದರೆ ಜೆಡಿಎಸ್‌ನ ಒಳ ಕಚ್ಚಾಟದಿಂದ ಬೇಸತ್ತ ಸಿದ್ದರಾಮಯ್ಯ ಜೆಡಿಎಸ್‌ನಿಂದ ಹೊರನಡೆದರು. ಸಿದ್ದು ಹೊರನಡೆಯುತ್ತಿದ್ದಂತೆ ಒಂದು ಸಮಯದಲ್ಲಿ ಜೆಡಿಎಸ್ ಪಕ್ಷಕ್ಕೆ ಚೆಲುವನಾರಯಣ್ ಸ್ವಾಮಿ, ಕೆ. ಗೋಪಾಲಯ್ಯ, ಜಮೀರ್ ಆಹ್ಮದ್ ಖಾನ್, ಭೀಮ್ ನಾಯಕ್, ಅಖಂಡ ಶ್ರೀನಿವಾಸ್ ಮೂರ್ತಿ, ಇಕ್ಬಾಲ್ ಅನ್ಸಾರಿ ಅವರನೆಲ್ಲಾ ಕರೆತಂದು, ಸೀಟ್ ಕೊಟ್ಟು ಅವರನ್ನು ಉತ್ತುಂಗಕ್ಕೆ ಏರಿಸಿದ್ದು ಮಾಜಿ ಪ್ರಧಾನಿ ದೇವೆಗೌಡರು. ಬಳಿಕ ಸಿದ್ದರಾಮಯ್ಯ ಪಕ್ಷದಿಂದ ಹೊರನಡೆಯುತ್ತಿದ್ದಂತೆ ಪಕ್ಷದಲ್ಲಿ ಒಬ್ಬರಂತೆ ಒಬ್ಬರು ಪಕ್ಷ ನಿಷ್ಠೆಯನ್ನು ಗಾಳಿಗೆ ತೂರಿ ಸಿದ್ದರಾಮಯ್ಯ ಹಾದಿಯನ್ನೇ ಹಿಡಿದರು.! ಇದೇ ನೋಡಿ ಜೆಡಿಎಸ್ ಪಕ್ಷಕ್ಕೆ ಬಿದ್ದ ದೊಡ್ಡ ಹೊಡೆತ.!
- ತೆನೆ ಬಿಟ್ಟು `ಕೈ’ ಕೊಟ್ಟ ನಾಯಕರು: ಜೆಡಿಎಸ್‌ನ ಪ್ರಮುಖ ನಾಯಕರು ಪಕ್ಷ ತೊರೆಯುತ್ತಿರುವುದು ಪಕ್ಷದ ಅಸ್ತಿತ್ವಕ್ಕೆ ಭಾರೀ ಪೆಟ್ಟು ಕೊಡುತ್ತಿದೆ. ನಿರಂತರವಾಗಿ ಪ್ರಮುಖ ನಾಯಕರೆಲ್ಲಾ ಜೆಡಿಎಸ್ ತೊರೆದು ಬೇರೆ ಬೇರೆ ಪಕ್ಷ ಸೇರುತ್ತಿದ್ದಾರೆ. ಆದ್ರೆ ಅವರಿಗೆ ಪರ್ಯಾಯವಾಗಿ ಪಕ್ಷದಲ್ಲಿ ಯಾವ ನಾಯಕರನ್ನೂ ಬೆಳೆಸಲಾಗುತ್ತಿಲ್ಲ. ಇದುವೇ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ.
ಹೀಗೆ ಕರುನಾಡಿನ ಪ್ರಬಲ ಪ್ರಾದೇಶಿಕ ಪಕ್ಷ ಈ ರೀತಿ ತನ್ನ ಜಯಪ್ರಿಯತೆಯನ್ನು ಕಳೆದುಕೊಳ್ಳುತ್ತಿರುವುದು ನಿಜವಾಗ್ಲೂ ಕನ್ನಡಿಗರಲ್ಲಿ ನಿರಾಸೆ ಮೂಡಿಸಿದೆ. ರಾಷ್ಟ್ರೀಯ ಪಕ್ಷಗಳ ಸರ್ವಾಧಿಕಾರಿ ಧೋರಣೆಯನ್ನು ಧಿಕ್ಕರಿಸಿ ರೈತಪರ, ಕನ್ನಡಿಗರ ಪರ, ಜಾತ್ಯಾತೀತ ನಿಲುವಿನ ಪರ ಮೊಳಗಬಹುದಾದ ದನಿಯೊಂದು ಅಡಗುತ್ತಿರುವುದು ಬೇಸರದ ಸಂಗತಿಯಾಗಿದೆ. ಈಗಲೂ ಕಾಲ ಮಿಂಚಿಲ್ಲ. ಜೆಡಿಎಸ್ ತನ್ನ ಕಾರ್ಯಕರ್ತರ ವಿಶ್ವಾಸ ಗಳಿಸಿ, ಕುಟುಂಬ ರಾಜಕಾರಣ ಬದಿಗೊತ್ತಿ ಕಾರ್ಯಕರ್ತರ ಪಕ್ಷವಾಗಿ ಬೆಳೆಸಿದರೆ ಮತ್ತೆ ಜೆಡಿಎಸ್ ಫಿನಿಕ್ಸ್‌ನಂತೆ ಎದ್ದು ಬರುವುದರಲ್ಲಿ ಸಂದೇಹವೇ ಇಲ್ಲ.