ರಷ್ಯಾ ಮತ್ತು ಉಕ್ರೇನ್ ಯುದ್ದದಲ್ಲಿ ಭಾರತ ಅನುಸರಿಸಿದ ನೀತಿ, ಇದೀಗ ಅಮೇರಿಕಾವನ್ನು ಕೆರಳಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮತ್ತೆ ತಟಸ್ಥ ನಿಲುವನ್ನು ಅನುಸರಿಸಿದ್ದು, ಅಮೇರಿಕಾದ ಕೆಂಗಣ್ಣಿಗೆ ಗುರಿಯಾಗಿದೆ. ರಷ್ಯಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಒಬ್ಬಂಟಿಯನ್ನಾಗಿ ಮಾಡಬೇಕು, ಆ ಮೂಲಕ ರಷ್ಯಾದ ಪ್ರಾಬಲ್ಯವನ್ನ ಹತ್ತಿಕ್ಕಬೇಕು ಎಂದುಕೊಂಡಿರುವ ಅಮೇರಿಕಕ್ಕೆ ಭಾರತದ ಬೆಂಬಲ ಸಿಗದಿರುವುದು ಬಹುದೊಡ್ಡ ಹಿನ್ನಡೆಯಾಗಿದೆ. ಭಾರತ ಜಗತ್ತಿನ ಶಕ್ತಿಶಾಲಿ ಆರ್ಥಿಕತೆಗಳಲ್ಲಿ ಒಂದಾಗಿದ್ದು, ರಷ್ಯಾವನ್ನು ಆರ್ಥಿಕವಾಗಿ ಕಟ್ಟಿಹಾಕಬೇಕಾದರೆ, ಭಾರತದ ಬೆಂಬಲ ಅತ್ಯಗತ್ಯ. ಆದರೆ ಭಾರತ ಮಾತ್ರ ತನ್ನ ಈ ಹಿಂದಿನ ಅಲಿಪ್ತ ನೀತಿಯನ್ನೇ ಅನುಸರಿಸುತ್ತಿದೆ.

ಇನ್ನು ರಷ್ಯಾ ಮತ್ತು ಉಕ್ರೇನ್ ದೇಶಗಳು ಮಾತುಕತೆಗಳ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು, ಶಾಂತಿ ಸ್ಥಾಪನೆಯತ್ತ ಎರಡು ದೇಶಗಳು ಯೋಚಿಸಬೇಕೆಂದು ಭಾರತ ಎರಡು ದೇಶಗಳಲ್ಲಿ ಮನವಿ ಮಾಡಿಕೊಂಡಿತ್ತು. ಭಾರತದ ವಿದೇಶಾಂಗ ಸಚಿವ ಜೈಶಂಕರ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ “ನಾವು ಶಾಂತಿಯ ಪರವಾಗಿದ್ದೇವೆ. ಎರಡು ದೇಶಗಳು ಮಾತುಕತೆಯಲ್ಲಿ ತೊಡಗಿಕೊಳ್ಳಬೇಕು. ಆದರೆ ನಾವು ಯಾವುದೇ ದೇಶದ ವಿರುದ್ದವಾಗಲಿ, ಪರವಾಗಲಿ ಮತಚಲಾವಣೆ ಮಾಡಲು ಸಾಧ್ಯವಿಲ್ಲ. ಇದು ನಮ್ಮ ಬದ್ದತೆಯ ಸ್ಪಷ್ಟ ನಿಲುವಾಗಿದೆ” ಎಂದು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದರು.
ಭಾರತ ವಿಶ್ವಮಟ್ಟದಲ್ಲಿ ತಟಸ್ಥ ನಿಲುವನ್ನು ಅನುಸರಿಸುವ ಮೂಲಕ ಪರೋಕ್ಷವಾಗಿ ರಷ್ಯಾಗೆ ಬೆಂಬಲ ನೀಡಿತು. ಭಾರತದ ಈ ನಿಲುವಿನಿಂದ ಕೆರಳಿರುವ ಅಮೇರಿಕದ ಜೋ ಬೈಡೆನ್ ಸರ್ಕಾರ, ಭಾರತದ ಮೇಲೆಯೂ ಆರ್ಥಿಕ ನಿರ್ಬಂಧ ಹೇರುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಅಮೇರಿಕಾದ ಕೆಲ ಪತ್ರಿಕೆಗಳು ವರದಿಮಾಡಿವೆ. ವೈಟ್‍ಹೌಸ್‍ನಲ್ಲಿ ಈ ಕುರಿತು ಉನ್ನತ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ. ಆದರೆ ಕೆಲ ಅಧಿಕಾರಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿದರೆ, ಏಷ್ಯಾದ ನಮ್ಮ ಬಹುದೊಡ್ಡ ಮಿತ್ರನನ್ನು ಕಳೆದುಕೊಂಡಂತಾಗುತ್ತದೆ. ಭವಿಷ್ಯದಲ್ಲಿ ಇದರ ನೇರ ಪರಿಣಾಮ ಅಮೇರಿಕದ ಮೇಲಾಗುತ್ತದೆ ಎಂದು ಅಧ್ಯಕ್ಷ ಬೈಡೆನ್‍ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನು ಅಮೇರಿಕವು ಕಾಟ್ಸಾ ಕಾಯ್ದೆ ಅನ್ವಯ ನಿರ್ಬಂಧ ಹೇರಲು ಮುಂದಾಗಿದೆ ಎಂದು ಅಮೇರಿಕಾದ ಪತ್ರಿಕೆಗಳು ವರದಿ ಮಾಡಿರುವ ಬೆನ್ನಲ್ಲೇ, ಬೈಡೆನ್ ಸರ್ಕಾರದ ಈ ಕ್ರಮವನ್ನು ಬಹಿರಂಗವಾಗಿ ವಿರೋಧಿಸಿರುವ ರಿಪಬ್ಲಿಕ್ ಪಕ್ಷದ ಸಂಸದ ಟೆಡ್ ಕ್ರೂಸ್ “ಇದೊಂದು ವಿವೇಕ ರಹಿತ ನಿರ್ಧಾರವಾಗಲಿದೆ. ಭಾರತ ಅನೇಕ ಕ್ಷೇತ್ರಗಳಲ್ಲಿ ನಮ್ಮ ಪಾಲುದಾರ. ಇತ್ತೀಚಿನ ವರ್ಷಗಳಲ್ಲಿ ಭಾರತ-ಅಮೇರಿಕಾದ ಸಂಬಂಧ ಉತ್ತಮವಾಗಿದೆ. ಅಧ್ಯಕ್ಷ ಬೈಡೆನ್ ಭಾರತದ ಮೇಲೆ ಕಾಟ್ಸಾ ಕಾಯ್ದೆ ಪ್ರಯೋಗಿಸಿದರೆ ಅದೊಂದು ಮುರ್ಖ ನಿರ್ಧಾರವಾಗಲಿದೆ” ಎಂದಿದ್ದಾರೆ.