ಬಾಗಲಕೋಟೆ ನ 29 : ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಆದಷ್ಟು ಬೇಗ ಮುಖ್ಯಮಂತ್ರಿಯಾಗುತ್ತಾರೆ. ಯಾವಾಗ ಆಗುತ್ತಾರೆ ಎಂಬುದು ಗೊತ್ತಿಲ್ಲ. ಇಂದಲ್ಲ ನಾಳೆ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಫೊಟಕ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಬಿಜೆಪಿ ಹಿಂದುಳಿದ ವರ್ಗದ ಘಟಕದ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ ಅವರು ‘ಮುಗುಗೇಶ್ ನಿರಾಣಿ ಅವರಿಗೆ ಸಿಎಂ ಆಗೋ ಶಕ್ತಿ ಇದೆ. ಅವರು ಮುಂದೊಂದು ದಿನ ಸಿಎಂ ಆಗಲಿದ್ಧಾರೆ. ಹಾಗಂತ ನಾಳೆಯೇ ಬಸವರಾಜ ಬೊಮ್ಮಾಯಿ ಅವರನ್ನು ಕೆಳಗಿಳಿಸುತ್ತಾರೆ ಎಂದು ಬರೀಬೇಡಿ. ಅವರು ಯಾವಾಗ ಸಿಎಂ ಆಗುತ್ತಾರೆ ಎಂಬುದು ಗೊತ್ತಿಲ್ಲ. ಇಡೀ ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವಂತ ಸಿಎಂ ಆಗಬೇಕು. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡ್ತಿಯೇನಪ್ಪಾ ಎಂದು ಸಚಿವ ನಿರಾಣಿರನ್ನು ವೇದಿಕೆ ಮೇಲೇಯೇ ಈಶ್ವರಪ್ಪ ಕೇಳಿದ್ದಾರೆ. ಇದಕ್ಕೆ ನಿರಾಣಿ ಅವರು ಥಂಬ್ಸ ಅಪ್ ಮಾಡಿ ನಗುತ್ತಲೇ ಓಕೆ ಅಂದಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ಹಲವು ನಾಯಕರು ಸಿಎಂ ಆಗಲು ಪೈಪೋಟಿ ನಡೆಸಿದ್ದರು. ಈ ರೇಸ್ ನಲ್ಲಿ ಬೀಳಗಿ ಶಾಸಕ ಮುರುಗೇಶ್ ನಿರಾಣಿ ಅವರ ಹೆಸರೂ ಕೇಳಿ ಬಂದಿತ್ತು. ಅದರಲ್ಲೂ ಸಿಎಂ ಮಾನಸ ಪುತ್ರ ಎಂದು ಗುರುತಿಸಿಕೊಂಡಿದ್ದ ಮುರುಗೇಶ್ ನಿರಾಣಿ ಸಿಎಂ ರೇಸ್ ನಲ್ಲಿ ಮುಂದಿದ್ದರು. ಆದರೆ ಅಂತಿಮವಾಗಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು.