Karwar: ಕೆಲ ದಿನಗಳ ಹಿಂದಷ್ಟೇ ಭಾರೀ ಮಳೆಯಿಂದಾಗಿ ಉತ್ತರ ಕನ್ನಡ (Uttara kannada) ಜಿಲ್ಲೆಯಲ್ಲಿ ಶಿರೂರು ಗುಡ್ಡ ಕುಸಿದ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಅವಗಢ ಸಂಭವಿಸಿದೆ.
ಕಾರವಾರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಳಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಸೇತುವೆ ನಿನ್ನೆ ಮಧ್ಯರಾತ್ರಿ ವೇಳೆ ಕುಸಿದಿದೆ. ಈ ಘಟನೆಯಲ್ಲಿ ಲಾರಿಯೊಂದು ಚಾಲಕನ ಸಮೇತ ನದಿಗೆ ಬಿದ್ದಿದೆ.
ಕಾರವಾರ (Karwara) ಗೋವಾ ಸಂಪರ್ಕ ಮಾಡುವ ಈ ಸೇತುವೆ ಕೋಡಿಭಾಗ್ ಬಳಿ ಇದ್ದು ಬುಧವಾರ ತಡರಾತ್ರಿ ಸುಮಾರು 12.30 ರ ವೇಳೆ ಕುಸಿದು ಬಿದ್ದಿದೆ. ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದ್ದು, ಇದೇ ವೇಳೆ ಗೋವಾ (Goa) ದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಟ್ರಕ್ ನದಿಗೆ ಬಿದ್ದಿದ್ದು, ತಕ್ಷಣ ಮೀನುಗಾರರು ಹಾಗೂ ಪೋಲಿಸರು ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ ಎಂಬುವವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು 1983ರಲ್ಲಿ ಕಾಳಿ ನದಿಯ ಮೇಲೆ ನಿರ್ಮಿಸಲಾಗಿದ್ದ ಈ ಸೇತುವೆಯು ಕರ್ನಾಟಕ (Karnataka) ಹಾಗೂ ಗೋವಾ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರದಲ್ಲಿ ಒಟ್ಟು 2 ಸೇತುವೆಗಳನ್ನು ಕಟ್ಟಲಾಗಿತ್ತು. ಅವುಗಳಲ್ಲಿ ಈಗ ಕುಸಿದಿರುವುದು ಹಳೆಯ ಸೇತುವೆ. ಮುಂಜಾಗ್ರತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೊಸ ಸೇತುವೆಯ ಮೇಲಿಂದಲೂ ವಾಹನ ಸಂಚಾರ ರದ್ದಾಗಿದೆ. ಹಾಗಾಗಿ ಕಾರವಾರ ಮತ್ತು ಗೋವಾ ಸಂಪರ್ಕ ಸ್ಥಗಿತಗೊಂಡಿದೆ.