ರವಿಚಂದ್ರನ್ ಅವರ ಹೊಸ ಚಿತ್ರ ‘ಕನ್ನಡಿಗ’ದ ಟೀಸರ್ ಭಾನುವಾರ ಬಿಡುಗಡೆಯಾಗಲಿದೆ. ಕನಸುಗಾರನ ಅರವತ್ತನೇ ವರ್ಷದ ಶುಭ ಸಂದರ್ಭದಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿರುವುದು ಅಭಿಮಾನಿ ಪ್ರೇಕ್ಷಕರಿಗೆ ಖುಷಿ ತಂದಿದೆ.
ಕ್ರೇಜಿಸ್ಟಾರ್ ಅಂದರೇನೇ ಕನ್ನಡ ಚಿತ್ರರಂಗದ ಅದ್ಧೂರಿ ಆಸ್ತಿ. ಅವರನ್ನು ಇರಿಸಿಕೊಂಡು ಕನ್ನಡಿಗ ಹೆಸರಿನ ಚಿತ್ರ ಮಾಡಿರುವವರು ನಿರ್ದೇಶಕ ಬಿ ಎಂ ಗಿರಿರಾಜ್. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ ಚಿತ್ರದ ಹೈಲೈಟ್ ಆಗಿದೆ.
ಸಾಮಾನ್ಯವಾಗಿ ರವಿಚಂದ್ರನ್ ಜನ್ಮದಿನ ಎಂದರೆ ಕ್ರೇಜಿಸ್ಟಾರ್ ಅಭಿಮಾನಿಗಳು ಅವರ ಮನೆಮುಂದೆ ಸೇರಿರುತ್ತಾರೆ. ಆದರೆ ಕಳೆದ ವರ್ಷ ಅದಕ್ಕೆ ಕೊರೊನ ತಡೆಯಾಗಿತ್ತು. ಈ ಬಾರಿ ಅರವತ್ತನೇ ವರ್ಷವನ್ನು ಅದ್ಧೂರಿಯಾಗಿಸುವ ಉತ್ಸಾಹ ಎಲ್ಲರಲ್ಲಿಯೂ ಇತ್ತು. ಆದರೆ ಮತ್ತೆ ಅದೇ ಕೋವಿಡ್ ಕಾಟದಿಂದಾಗಿ ಆನ್ಲೈನ್ ಆಚರಣೆಗಷ್ಟೇ ತೃಪ್ತಿ ಪಡುವಂತಾಗಿದೆ. ಅಂದಹಾಗೆ ‘ಮೈತ್ರಿ’ಯಂಥ ಅದ್ಭುತ ಚಿತ್ರ ನೀಡಿರುವ ಗಿರಿರಾಜ್ ಮತ್ತು ನಿರ್ಮಾಪಕ ಎನ್ ಎಸ್ ರಾಜ್ ಕುಮಾರ್ ಈ ಬಾರಿ ರವಿಚಂದ್ರನ್ ಅವರೊಡನೆ ಸೇರಿ ಮೂಡಿಸಿರುವ ಜಾದೂ ಬಗ್ಗೆ ಸಹಜ ಕುತೂಹಲ ಎಲ್ಲೆಡೆ ಮನೆ ಮಾಡಿದೆ