- ಕರಾವಳಿಯ ದೈವ ಲೋಕಕ್ಕೆ ಕರೆದೊಯ್ಯುವ ರಿಷಬ್ ತಂಡ
- ಅದ್ದೂರಿ ಮೇಕಿಂಗ್ ಕಣ್ಣು ಕಟ್ಟಿಸುವ ದೃಶ್ಯ ವೈಭವ
- ಕಥೆಗಿಂತಲೂ ಮೇಕಿಂಗ್ ಹೆಚ್ಚು ಎಂದ ಪ್ರೇಕ್ಷಕ ಪ್ರಭುಗಳು
ಮೂರು ವರ್ಷಗಳ ಹಿಂದೆ ತೆರೆಕಂಡ ‘ಕಾಂತಾರ’ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಅಧ್ಯಾಯ ಬರೆದಿತ್ತು. ಕರಾವಳಿಯ ಭೂತ-ದೈವ ಆರಾಧನೆ,
ಅರಣ್ಯ ಜನಾಂಗದ ಬದುಕು ಮತ್ತು ಆಡಳಿತವರ್ಗದ ನಡುವಿನ ಸಂಘರ್ಷವನ್ನು ಚಿತ್ರಿಸಿ, ಅದು ದೇಶದಾದ್ಯಂತ ಮೆಚ್ಚುಗೆ ಗಳಿಸಿತ್ತು. ಪ್ರೇಕ್ಷಕರಲ್ಲಿ ಮುಂದುವರಿದ ಭಾಗದ ನಿರೀಕ್ಷೆ ಇರುವಾಗಲೇ,
ನಿರ್ದೇಶಕ-ನಟ ರಿಷಬ್ ಶೆಟ್ಟಿ ಆ ಚಿತ್ರಕ್ಕೆ ಪ್ರೀಕ್ವೆಲ್ ಮಾಡುತ್ತಿರುವುದಾಗಿ ಘೋಷಿಸಿದ್ದರು. ಅದೇ ಕುತೂಹಲಕ್ಕೆ ತೆರೆ ಬಿದ್ದಿದ್ದು, ಇದೀಗ ಬಿಡುಗಡೆಯಾದ ‘ಕಾಂತಾರ: ಚಾಪ್ಟರ್ 1’ ಮೂಲಕ.
ಚಿತ್ರವು ಕ್ರಿ.ಶ. 4-5ನೇ ಶತಮಾನದ ಕಾಲದ ಕದಂಬರ ಆಳ್ವಿಕೆಯನ್ನು ಹಿನ್ನೆಲೆಯಾಗಿಸಿಕೊಂಡಿದೆ. ರಿಷಬ್ ಶೆಟ್ಟಿ ಈ ಬಾರಿ ಪ್ರೇಕ್ಷಕರನ್ನು ಸುಮಾರು 1500 ವರ್ಷ ಹಿಂದಿನ ಕಾಲಕ್ಕೆ ಕರೆದೊಯ್ಯುತ್ತಾರೆ.
ಕಥೆಯ ಕೇಂದ್ರದಲ್ಲಿ ಬಾಂಗ್ರಾ ರಾಜ ಮನೆತನ ಮತ್ತು ಈಶ್ವರ ಹೂದೋಟದ ಜನರ ನಡುವಿನ ಸಂಘರ್ಷವಿದೆ. ನಾಯಕ ಪಾತ್ರ ‘ಬೆರ್ಮೆ’ ಆಗಿ ರಿಷಬ್ ಮಿಂಚಿದರೆ,
ಬಾಂಗ್ರಾ ಅರಸರಾಗಿ ಜಯರಾಮ್ (ರಾಜಶೇಖರ) ಹಾಗೂ ಕುಲಶೇಖರನಾಗಿ ಗುಲ್ಶನ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಇವರ ನಡುವಿನ ರಣಭೂಮಿಯಲ್ಲಿ ದೈವದ ಪಾತ್ರವೇನು,
ಹೂದೋಟದ ನಂಟೇನು ಎಂಬುದೇ ಕಥೆಯ ತೀವ್ರತೆಯನ್ನು ಹೆಚ್ಚಿಸುತ್ತದೆ.

ಇನ್ನು ಕಾಂತಾರ’ ಸಿನಿಮಾದಲ್ಲಿ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ರಿಷಬ್, ಈ ಬಾರಿ ಮತ್ತಷ್ಟು ತೀವ್ರ ಅಭಿನಯ ತೋರಿಸಿದ್ದಾರೆ. ವಿಶೇಷವಾಗಿ ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಹೊಳಪು ಕಾಣಿಸುತ್ತದೆ.
ಕ್ಲೈಮ್ಯಾಕ್ಸ್‌ನಲ್ಲಿನ ಭಾವೋದ್ರಿಕ್ತ ನಟನೆಯಿಂದ ಪ್ರೇಕ್ಷಕರ ಮೆಚ್ಚುಗೆ ಮತ್ತೆ ಗಳಿಸುತ್ತಾರೆ. ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ಅಚ್ಚರಿ ಮೂಡಿಸುವಷ್ಟು ಪ್ರಬಲವಾಗಿ ನಟಿಸಿದ್ದಾರೆ.
ಗುಲ್ಶನ್ ದೇವಯ್ಯ ಪಾತ್ರಕ್ಕೆ ಹೆಚ್ಚಿನ ನಿರೀಕ್ಷೆ ಇತ್ತು, ಆದರೆ ಅವರು ಭಾಗಶಃ ಮಾತ್ರ ತೃಪ್ತಿ ನೀಡುತ್ತಾರೆ. ಜಯರಾಮ್ ತಮ್ಮ ತೂಕದ ಅಭಿನಯದಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಅಜನೀಶ್ ಲೋಕನಾಥ್ ಹಿಂದಿನ ಭಾಗಕ್ಕೆ ನೀಡಿದ ಸಂಗೀತಕ್ಕಾಗಿ ಅಪಾರ ಮೆಚ್ಚುಗೆ ಪಡೆದಿದ್ದರು. ಈ ಬಾರಿ ಕೂಡ ಹಿನ್ನಲೆ ಸಂಗೀತದಲ್ಲಿ ಅವರು ಮಾಯೆ ಮಾಡಿದ್ದರೂ,
ಹಾಡುಗಳಲ್ಲಿ ಹೊಸತನ ಕಾಣಸಿಗದೆ ಸ್ವಲ್ಪ ನಿರಾಸೆ ಮೂಡುತ್ತದೆ. ಹಳೆಯ ಹಾಡುಗಳ ಟ್ಯೂನ್‌ಗಳನ್ನು ಪುನರುಪಯೋಗಿಸಿರುವುದು ಪ್ರೇಕ್ಷಕರಲ್ಲಿ ಅಸಮಾಧಾನ ತಂದಿದೆ.
ಆದರೆ ಭಾರೀ ಸನ್ನಿವೇಶಗಳಲ್ಲಿ ನೀಡಿದ ಬಿಜಿಎಂ ದೃಶ್ಯಗಳನ್ನು ಮತ್ತಷ್ಟು ಭವ್ಯಗೊಳಿಸಿದೆ.
ಇನ್ನು ಹಿಂದಿನ ‘ಕಾಂತಾರ’ ಸರಳ ಮೇಕಿಂಗ್‌ನಿಂದ ಕೂಡಿದ್ದರೆ, ಈ ಬಾರಿ ಅದ್ದೂರಿ ಮೇಕಿಂಗ್‌ನ ಮೇಲೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ದೊಡ್ಡಮಟ್ಟದ ಸೆಟ್‌ಗಳು, ಅರಮನೆ, ದೇವಸ್ಥಾನ,
ದರ್ಬಾರ್ ಹಾಗೂ ಕಾಡಿನ ಲೋಕವನ್ನು ವಿಶಿಷ್ಟವಾಗಿ ಸೃಷ್ಟಿಸಲಾಗಿದೆ. ವಿಶೇಷವಾಗಿ ವಿಎಫ್‌ಎಕ್ಸ್ ತಂಡ ಹುಲಿ, ಕಾಡುಪಾಪ ಮತ್ತು ಅರಣ್ಯದ ದೃಶ್ಯಗಳನ್ನು ಅಚ್ಚುಕಟ್ಟಾಗಿ ತೋರಿಸಿದೆ.
ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ಕೆಲಸ ಹಾಗೂ ಕಲಾ ನಿರ್ದೇಶಕ ಧರಣಿ, ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್ ಅವರ ಸಂಯೋಜನೆ ಚಿತ್ರದ ಆಕರ್ಷಕತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಚಿತ್ರದ ಮೊದಲಾರ್ಧ ಪಾತ್ರ ಪರಿಚಯ ಹಾಗೂ ಕಥೆಯ ವಿಸ್ತರಣೆಗೆ ಮೀಸಲಾಗಿದ್ದು, ಇಂಟರ್‌ವಲ್‌ಗೂ ಮುನ್ನ ಬರುವ ಆ್ಯಕ್ಷನ್ ಸನ್ನಿವೇಶ ಪ್ರೇಕ್ಷಕರನ್ನು ರೋಮಾಂಚಗೊಳಿಸುತ್ತದೆ.
ದ್ವಿತೀಯಾರ್ಧದಲ್ಲಿ ಭಾರೀ ಯುದ್ಧ ದೃಶ್ಯಗಳು ‘ಬಾಹುಬಲಿ’ಯಂತೆಯೇ ಅದ್ದೂರಿ ಹೊಳಪು ತರುತ್ತವೆ. ಆದರೆ ಕಥೆಯ ಭಾವನಾತ್ಮಕ ತೀವ್ರತೆ, ಹಿಂದಿನ ಭಾಗದಷ್ಟು ಪ್ರೇಕ್ಷಕರ ಮನದಲ್ಲಿ ನಾಟಿಕೊಳ್ಳುವುದಿಲ್ಲ.
ಕೆಲವಡೆ ಆ್ಯಕ್ಷನ್ ಅಬ್ಬರವೇ ಕಥೆಯನ್ನು ಮೀರಿಬಿಡುತ್ತದೆ.ಕಾಂತಾರ’ ಮೊದಲ ಭಾಗದ ತೀವ್ರ ಕ್ಲೈಮ್ಯಾಕ್ಸ್ ಹಾಗೂ ಭಾವೋದ್ರಿಕ್ತ ದೃಶ್ಯಗಳನ್ನು ನೆನಪಿಸಿಕೊಂಡು ಪ್ರೇಕ್ಷಕರು ಈ ಭಾಗವನ್ನು ಹೋಲಿಕೆ ಮಾಡುವುದು ಸಹಜ.
ಆದರೆ ‘ಕಾಂತಾರ: ಚಾಪ್ಟರ್ 1’ ಅದ್ದೂರಿ ಮೇಕಿಂಗ್‌ನಿಂದ ಮಿಂಚಿದರೂ, ಭಾವನಾತ್ಮಕ ನಂಟಿನಲ್ಲಿ ಸ್ವಲ್ಪ ಹಿಂದುಳಿದಿದೆ.
ಇದನ್ನು ಓದಿ : ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಧಮಾಕಾ: ಪ್ರೇಕ್ಷಕ ಪ್ರಭುವಿನ ಮನಗೆದ್ದ ‘ಸು ಫ್ರಮ್ ಸೋ’ ಸಿನಿಮಾ
ಕೊನೆಯಲ್ಲಿ ಮತ್ತೊಂದು ರಣಭಯಂಕರ ಆ್ಯಕ್ಷನ್ ಹಾಗೂ ಟ್ವಿಸ್ಟ್‌ಗಳೊಂದಿಗೆ ಸಿನಿಮಾ ಮುಗಿದು, ಮುಂದಿನ ಅಧ್ಯಾಯದ ನಿರೀಕ್ಷೆಯನ್ನು ಮೂಡಿಸಿದೆ.