ಬೆಂಗಳೂರು, ಜು. 19: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಪ್ರತಿಬಾರಿ ಒಂದಿಲ್ಲೊಂದು ಆರೋಪ ನಡೆಸುತ್ತಲೇ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಾರೊ ಒಬ್ಬರು ದೆಹಲಿಗೆ ಹೋಗಿ 2000 ಕೋಟಿ ಕೊಡುವೆ, ನನ್ನ ಸಿಎಂ ಮಾಡಿ ಎಂದು ಕೇಳಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ ಬಂದ ನಂತರ ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗಳು ನಡೆಯುತ್ತಿವೆ. ಸಿಎಂ ಆಗಬೇಕೆಂದು ಹಲವರು ಈಗಾಗಲೇ ಟವಾಲ್ ಹಾಕಲು ರೆಡಿಯಾಗಿ ನಿಂತಿದ್ದಾರೆ.
ಇದೇ ಜುಲೈ, 26 ಕ್ಕೆ ತಮ್ಮ ಅಧಿಕಾರವಧಿಯ 2 ನೇ ವರ್ಷದ ಮುಗಿಸಿದ ನಂತರ ಯಡಿಯೂರಪ್ಪ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಹೋಗಿ ಬಂದ ನಂತರ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ಸಿಎಂ ರೇಸ್ ನಲ್ಲಿ ಇರುವರು ಯಾರಿರಬಹುದು ಎಂದು ಚರ್ಚೆಗಳು ನಡೆಯುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಾಸಕರಾದ ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.
ಇದರ ನಡುವೆ ಮತ್ತೊಂದು ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ. ಹಿರಿಯರಾದ ಈಶ್ವರಪ್ಪ, ಜಗದೀಶ್ ಶೆಟ್ಟರ್ ಟೀಂ ಬದಲಿಸಿ, ಹೊಸಬರನ್ನು ಕ್ಯಾಬಿನೆಟ್ ಗೆ ಸೇರಿಸಿಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.