Govt Launches new Website for trekking enthusiasts: Minister Ishwar Khandre said to trek if you want to
Bengaluru: ರಾಜ್ಯದಲ್ಲಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ಚಾರಣ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮತ್ತೆ ಚಾಲನೆ ನೀಡಿದೆ. ಚಾರಣ ಪಥ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಅದಕ್ಕಾಗಿ 40 ಲಕ್ಷ ರು. ವೆಚ್ಚದಲ್ಲಿ ನೂತನ ವೆಬ್‌ಸೈಟ್ (Website) ಅಭಿವೃದ್ಧಿಪಡಿಸಲಾಗಿದೆ.

ವಿಕಾಸಸೌಧದಲ್ಲಿ ಗುರುವಾರ ನೂತನ (www.aranyavihaara.karnataka.gov.in)ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿ ಮನಸೋ ಇಚ್ಛೆ ಚಾರಣ ಮಾಡಿ ಎಂದಿದ್ದಾರೆ. ಹೊಸ ವೆಬ್ ಸೈಟ್ ಲಾಂಚ್ ಮಾಡಿದ ಅವರು ಕಳೆದ ಜನವರಿ 26-27ರಂದು ಕುಮಾರಪರ್ವತ ಚಾರಣ ಪಥಕ್ಕೆ ಸಾವಿರಾರು ಮಂದಿ ಒಮ್ಮೆಲೇ ಪ್ರವೇಶಿಸಿದ್ದರು. ಅದರಿಂದ ಅಲ್ಲಿನ ಪರಿಸರ ಮತ್ತು ವನ್ಯ ಜೀವಿಗಳಿಗೆ ಸಮಸ್ಯೆಯಾಗಿತ್ತು.
ಹೀಗಾಗಿ ಪ್ರವಾಸಿ ಪ್ರಿಯರಿಗೆ ನಿರ್ಬಂಧ ಹೇರಲಾಗಿತ್ತು. ಈಗ ಚಾರಣ ಪ್ರಕ್ರಿಯೆಗೆ ಹೊಸ ವ್ಯವಸ್ಥೆ ಜಾರಿಗೊಳಿಸಿ, ಮರು ಚಾಲನೆ ನೀಡಲಾಗಿದೆ ಎಂದರು. ಚಾರಣಕ್ಕೆ ತೆರಳುವವರು ವೆಬ್‌ಸೈಟ್‌ನಲ್ಲಿ ಮುಂಗಡ ದಿನಾಂಕ ನಿಗದಿ ಮಾಡಿಕೊಳ್ಳಬೇಕು.ಪ್ಯಾನ್ ಕಾರ್ಡ್ (Pan Card), ವಾಹನ ಚಾಲನಾ ಪರವಾನಗಿ ಪ್ರಮಾಣಪತ್ರ, ಆಧಾರ್ ಕಾರ್ಡ್ ಹೀಗೆ ಯಾವುದಾದರು ಸರ್ಕಾರದ ಗುರುತಿನ ಚೀಟಿ ಸಲ್ಲಿಸಬೇಕಿದೆ.
ಅಷ್ಟೇ ಅಲ್ಲದೆ ಯಾರು ಆನ್‌ಲೈನ್‌ನಲ್ಲಿ ಬುಕ್ಕಿಂಗ್ (Online Booking) ಮಾಡಿದ್ದಾರೋ ಅವರೇ ಚಾರಣಕ್ಕೆ ತೆರಳಬೇಕಿದೆ. ಒಂದು ಫೋನ್ ನಂಬರ್‌ನಲ್ಲಿ 10 ಟಿಕೆಟ್ ಮುಂಗಡ ಕಾಯ್ದಿರಿಸಲು ಅವಕಾಶವಿದೆ ಎಂದರು. ಪ್ರತಿ ಚಾರಣ ಪಥಕ್ಕೆ ದಿನಕ್ಕೆ 300 ಚಾರಣಿಗರಿಗೆ ಅವಕಾಶ ನೀಡಲಾಗುವುದು. ಸದ್ಯ 5 ರಿಂದ 6 ಚಾರಣ ಪಥಗಳಿಗೆ ಮಾತ್ರ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ತಿಂಗಳ ಅಂತ್ಯದಲ್ಲಿ ಎಲ್ಲ 23 ಚಾರಣ ಪಥಕ್ಕೂ ಬುಕ್ಕಿಂಗ್ ವ್ಯವಸ್ಥೆ ಅಳವಡಿಸಲಾಗುವುದು. ಮತ್ತಷ್ಟು ಚಾರಣ ಪಥಗಳನ್ನು ಗುರುತಿಸಲಾಗುತ್ತಿದ್ದು, ಸುಮಾರು 40 ರಿಂದ 50 ಚಾರಣ ಪಥಗಳನ್ನು ನೂತನ ವ್ಯವಸ್ಥೆ ಅಡಿಗೆ ತರಲಾಗುತ್ತದೆ ಎಂದಿದ್ದಾರೆ.