Preparations for Strike by Transport Employees: KSRTC, BMTC Bus Passengers are Worried
Bengaluru: ಬೆಂಗಳೂರಿನ ಮಧ್ಯಮ ವರ್ಗದ ಜನರಿಗೆ ಕೆಎಸ್ಆರ್ಟಿಸಿ (KSRTC) ಮತ್ತು ಬಿಎಂಟಿಸಿ ಬಸ್ ಗಳು ಜೀವನಾಡಿಯಾಗಿದ್ದು ಅರ್ಧಗಂಟೆ ಬಸ್ಸುಗಳು ಬರಲಿಲ್ಲ ಅಂದರೆ ಪರದಾಡುವಂತಾಗುತ್ತದೆ. ಅಂತಹದ್ದರಲ್ಲಿ ಇಡೀ ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳ ಸಂಚಾರವೇ ಇರುವುದಿಲ್ಲ ಅಂದರೆ ಜನರ ಪರಿಸ್ಥಿತಿ ಏನಾಗಬೇಡ ಹೇಳಿ.
ಈಗಾಗಲೇ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೇರಿದಂತೆ, ಒಟ್ಟು ಆರು ಸಾರಿಗೆ ಸಂಘಟನೆಗಳು ಜತೆಗೂಡಿ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಂಡಿವೆ ಕೆಎಸ್ಆರ್ಟಿಸಿ, ಬಿಎಂಟಿಸಿ (BMTC) ಸೇರಿದಂತೆ ನಾಲ್ಕು ನಿಗಮಗಳ ನೌಕರರು ಸಾರಿಗೆ ಮುಷ್ಕರಕ್ಕೆ ಸಿದ್ಧರಾಗಲು ಸಾರಿಗೆ ಮುಖಂಡ ಅನಂತ್ ಸುಬ್ಬರಾವ್ ಕರೆ ನೀಡಿದ್ದಾರೆ.
ಇನ್ನು ರಾಜ್ಯ ಸರ್ಕಾರಕ್ಕೆ ಈ ತಿಂಗಳ 26 ರ ವರೆಗೆ ಗಡುವು ನೀಡಲಾಗಿದೆ. ಈ ತಿಂಗಳ 26 ರೊಳಗೆ ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ, 27 ರಂದು ಸಭೆ ನಡೆಸಿ ಮುಷ್ಕರದ ದಿನಾಂಕ ಘೋಷಣೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸರ್ಕಾರ ನಿರ್ಲಕ್ಷ್ಯ ನೀತಿ ಅನುಸರಿಸುತ್ತಿರುವ ಕಾರಣ ಅನಂತ ಸುಬ್ಬರಾವ್ (Ananta Subbarao), 27 ರಂದು ಸಭೆ ಮಾಡಿ ಮುಷ್ಕರ ದಿನಾಂಕ ಘೋಷಣೆ ಮಾಡುತ್ತೇವೆ ಎಂದಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಲ್ಲಿ ಒಟ್ಟು 23,978 ಬಸ್ಸುಗಳಿದ್ದು, ಇವುಗಳಲ್ಲಿ 1,04,450 ನೌಕರರಿದ್ದಾರೆ. ಈಗಾಗಲೇ ಸಾರಿಗೆ ನೌಕರರು 2020 ರ ಡಿಸೆಂಬರ್ – 10 ರಿಂದ 14ರ ವರೆಗೆ 5 ದಿನಗಳ ಕಾಲ ಮತ್ತು 2021ರಲ್ಲಿ ಏಪ್ರಿಲ್- 7 ರಿಂದ 21 ರ ವರೆಗೆ 17 ದಿನಗಳ ಮುಷ್ಕರ ಮಾಡಿ ಅಂದಿನ ಬಿಜೆಪಿ ಸರ್ಕಾರಕ್ಕೆ ಸರಿಯಾಗಿ ಬಿಸಿ ಮುಟ್ಟಿಸಿದ್ದರು. ಇದೀಗ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಸಿದ್ಧರಾಗಲು ಕರೆ ನೀಡಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳು:
- ಈಗ ಸಾರಿಗೆ ನಿಗಮಗಳು ಬಾಕಿ ಇರಿಸಿರುವ ಮೊತ್ತವನ್ನು ಚುಕ್ತಾ ಮಾಡಲು ಸರ್ಕಾರವು 4,562 ಕೋಟಿ ರೂಪಾಯಿಗಳನ್ನು ಹಾಗೂ ಶಕ್ತಿ ಯೋಜನೆಯ ಬಾಕಿ ಹಣವಾದ 1,346 ಕೋಟಿ ರೂಪಾಯಿಗಳನ್ನು ನಿಗಮಗಳಿಗೆ ನೀಡಬೇಕು.
- ಶಕ್ತಿ ಯೋಜನೆ (Shakti Scheme) ಅನುಷ್ಠಾನದ ಕಡೆಗೆ ಪ್ರತಿ ತಿಂಗಳು ಸಾರಿಗೆ ನಿಗಮಗಳಿಗೆ ಖರ್ಚಾಗುವ ಹಣವನ್ನು ಮುಂದಿನ ತಿಂಗಳು ಮೊದಲನೆ ವಾರದಲ್ಲೇ ಕೊಡಬೇಕು.
- ಸರಬರಾಜುದಾರರಿಗೆ ಮತ್ತು ಇಂಧನ ಬಾಕಿ ಕಡೆಗೆ 998 ಕೋಟಿ ರೂಪಾಯಿಗಳನ್ನು ಸರ್ಕಾರವು ನಿಗಮಗಳಿಗೆ ಕೊಡಬೇಕು.
- ಜಂಟಿ ಕ್ರಿಯಾ ಸಮಿತಿಯಿಂದ ದಿನಾಂಕ 25.01.2024 ರಂದು ಕೊಟ್ಟಿರುವ ದಿನಾಂಕ 01.01.2024 ರ ವೇತನ ಪರಿಷ್ಕರಣೆ, 01.01.2020ರಿಂದ 38 ತಿಂಗಳ ಬಾಕಿ ಪಾವತಿ, ನಿವೃತ್ತ ನೌಕರರಿಗೆ 27.06.2024 ರ ಆದೇಶದ ಪ್ರಕಾರ ಕೂಡಲೇ ಹಣ ಪಾವತಿಸುವುದು ಹಾಗೂ ಇತರೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು.
ಎಂಬ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದೆ ಇರಿಸಿದೆ. ಇನ್ನು ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.