- ಕನ್ನಡ ಸಿನಿ ಲೋಕಕ್ಕೆ ಸಿಹಿ ಸುದ್ದಿ
- ವಿಷ್ಣು ವರ್ಧನ್,ಸರೋಜಾದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna award to Vishnuvardhan and Saroja Devi)
- ಕನ್ನಡದ ಪರಂಪರೆಯನ್ನು ಬೆಳಗಿಸಿದ ಕಲಾವಿದರಿಗೆ ರಾಜ್ಯ ಸರ್ಕಾರದ ಮನ್ನಣೆ
Bengaluru: ಕನ್ನಡ ಚಿತ್ರರಂಗದ ದಿಗ್ಗಜರಾದ ಸಾಹಸಸಿಂಹ ವಿಷ್ಣುವರ್ಧನ್(Vishnuvardhan) ಹಾಗೂ ಹಿರಿಯ ನಟಿ ಸರೋಜಾದೇವಿಗೆ(Saroja Devi) ರಾಜ್ಯ ಸರ್ಕಾರವು
ಮರಣೋತ್ತರವಾಗಿ ರಾಜ್ಯದ ಅತಿ ದೊಡ್ಡ ನಾಗರಿಕ ಗೌರವವಾದ “ಕರ್ನಾಟಕ ರತ್ನ” ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಿದೆ. ದಶಕಗಳಿಂದಲೇ ಅಭಿಮಾನಿಗಳು ಮತ್ತು ಕಲಾರಸಿಕರು ಬೇಡಿಕೆ
ಇಟ್ಟುಕೊಂಡಿದ್ದ ಈ ನಿರ್ಣಯ ಕೊನೆಗೂ ಸಕಾರವಾದಂತಾಗಿದೆ. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ಮತ್ತು ಸ್ಥಳವನ್ನು
ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಲಿದೆ. ಇದೇ ಸಂದರ್ಭದಲ್ಲಿ ಸಂಪುಟವು ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡುವಂತೆ
ಕೇಂದ್ರ ಸರ್ಕಾರಕ್ಕೆ(Central Govt) ಪತ್ರ ಕಳುಹಿಸುವ ನಿರ್ಧಾರವನ್ನು ಸಹ ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಇತ್ತೀಚೆಗೆ ನಟಿ ಭಾರತಿ ವಿಷ್ಣುವರ್ಧನ್(Bharathi Vishnuvardhan) ಹಾಗೂ ಅವರ ಪುತ್ರ ಅನಿರುದ್ಧ್ ಸಿಎಂ ಸಿದ್ದರಾಮಯ್ಯ(CM Siddaramaiah) ಅವರನ್ನು ಭೇಟಿಯಾಗಿ
ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಮನವಿ ಮಾಡಿದ್ದರು. ಜೊತೆಗೆ ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್

ಕೂಡ ಇದೇ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು. ಕಲಾವಿದರ ಮನವಿ ಹಾಗೂ ಅಭಿಮಾನಿಗಳ ನಿರಂತರ ಒತ್ತಾಯದಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಇನ್ನು 1972ರಲ್ಲಿ ವಂಶವೃಕ್ಷ ಚಿತ್ರದ ಮೂಲಕ ನಟನ ಜೀವನವನ್ನು ಆರಂಭಿಸಿದ ವಿಷ್ಣುವರ್ಧನ್, ಅದೇ ವರ್ಷ ಬಿಡುಗಡೆಯಾದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್(Puttanna Kanagal) ಅವರ
ನಾಗರಹಾವು ಚಿತ್ರದ ಮೂಲಕ ನಾಯಕನಾಗಿ ಕನ್ನಡ ಬೆಳ್ಳಿತೆರೆಯಲ್ಲಿ ಮೆರೆದರು. ಮೊದಲ ಚಿತ್ರದಲ್ಲೇ ಅಸಾಧಾರಣ ಯಶಸ್ಸು ಕಂಡ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ತಮ್ಮ ನಾಲ್ಕು ದಶಕಗಳ ಸಿನಿ ಬದುಕಿನಲ್ಲಿ ವಿಷ್ಣುವರ್ಧನ್ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು.
ಅವರ ಅಸಾಧಾರಣ ಅಭಿನಯ ಸಾಮರ್ಥ್ಯದಿಂದ ಅವರು “ಸಾಹಸಸಿಂಹ” ಎಂಬ ಖ್ಯಾತಿಯನ್ನು ಗಳಿಸಿದರು. 2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು(Bangalore University) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಇನ್ನು ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ನಟಿಸಿರುವ ಸರೋಜಾದೇವಿ, ಒಟ್ಟು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮನೋಜ್ಞ ಅಭಿನಯ ಮತ್ತು ಅಸಾಧಾರಣ
ಶೈಲಿಯಿಂದ ಅವರು “ಅಭಿನಯ ಸರಸ್ವತಿ” (ಕನ್ನಡದಲ್ಲಿ) ಹಾಗೂ “ಕನ್ನಡತು ಪೈಂಗಿಲಿ” (ತಮಿಳಿನಲ್ಲಿ) ಎಂಬ ಬಿರುದುಗಳನ್ನು ಪಡೆದಿದ್ದರು.ಅವರು 1969ರಲ್ಲಿ ಪದ್ಮಶ್ರೀ,
1992ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಗಳಿಸಿದ್ದು, 2008ರಲ್ಲಿ ಭಾರತದ 60ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಹ ಸ್ವೀಕರಿಸಿದ್ದರು.
ಅವರ ಪ್ರಭಾವವು ಕೇವಲ ಕನ್ನಡದಲ್ಲೇ ಅಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿತ್ತು. ಒಟ್ಟಿನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ
ಇದನ್ನು ಓದಿ : ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು, ಕೆ.ಸಿ.ವ್ಯಾಲಿ 2ನೇ ಹಂತದ ಯೋಜನೆ, ಸಿಎಂ ಸಿದ್ದರಾಮಯ್ಯರಿಂದ ಚಾಲನೆ
ಅಭಿನಯ ಸರಸ್ವತಿ ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದರಿಗೆ ಸಲ್ಲಿಸಿದ ಸಾರ್ಥಕ ಗೌರವವಾಗಿದೆ. (Karnataka Ratna award to Vishnuvardhan and Saroja Devi)