ಜಮ್ಮು-ಕಾಶ್ಮೀರದ(Jammu-Kashmir) ಶೋಪಿಯಾನ್(Shopian) ಜಿಲ್ಲೆಯಲ್ಲಿ ಭಯೋತ್ಪಾದಕರು(Terrorist) ಕಾಶ್ಮೀರಿ ಪಂಡಿತರೊಬ್ಬರನ್ನು(Kashmiri Pandits) ಗುಂಡಿಕ್ಕಿ ಕೊಂದು ಆತನ ಸಹೋದರನನ್ನು ಗಾಯಗೊಳಿಸಿದ್ದಾರೆ. ಸಂತ್ರಸ್ತ ಸಹೋದರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಕಾಶ್ಮೀರಿ ಪಂಡಿತ್ ನನ್ನು 45 ವರ್ಷದ ಸುನೀಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನ ಸಹೋದರ ಪಿಂಟು ಕುಮಾರ್ ಎಂದು ಗುರುತಿಸಲಾಗಿದೆ. ದಾಳಿಕೋರರನ್ನು ಹಿಡಿಯಲು ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ ಎನ್ನಲಾಗಿದೆ. ಹತ್ಯೆಯ(Murder) ಕುರಿತು ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ್ ಲೋನ್, “ಶೋಪಿಯಾನ್ನಲ್ಲಿ ಹೇಡಿ ಭಯೋತ್ಪಾದಕರ ಮತ್ತೊಂದು ಭೀಕರ ದಾಳಿ ಇದಾಗಿದೆ.
ಈ ಹೇಯ ಹಿಂಸಾಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕುಟುಂಬಕ್ಕೆ ನನ್ನ ಸಂತಾಪ” ಎಂದು ಹೇಳಿದ್ದಾರೆ. ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮೋದಿಯವರ ಲೆಫ್ಟಿನೆಂಟ್ ಗವರ್ನರ್ ನೇಮಕ ಮತ್ತು ಆಡಳಿತ ವಿಫಲವಾಗಿದೆ, ಕಾಶ್ಮೀರಿ ಪಂಡಿತರು ಅಸುರಕ್ಷಿತರು, ಅವರು ಸುರಕ್ಷಿತವಾಗಿರುತ್ತಾರೆ ಎಂದು ಹೇಳಿ 370ನೇ ವಿಧಿಯನ್ನು ತೆಗೆದುಹಾಕಲಾಗಿದೆ.

ಇದಕ್ಕೆ ಪ್ರಧಾನಿ, ಗೃಹ ಸಚಿವರು ಮತ್ತು ಬಿಜೆಪಿ ಉತ್ತರಿಸಬೇಕು. ಎಲ್ಲಾ ಕಾಶ್ಮೀರಿ ಪಂಡಿತರು ಭಯದಿಂದ ಬದುಕುತ್ತಿದ್ದಾರೆ.” ಎಂದು ಹೇಳಿದರು. ಮಾಜಿ ಜಮ್ಮು-ಕಾಶ್ಮೀರಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, “ಇಂದು ದಕ್ಷಿಣ ಕಾಶ್ಮೀರದಿಂದ ಭೀಕರ ದುಃಖದ ಸುದ್ದಿ. ಅಪಘಾತ ಮತ್ತು ಉಗ್ರಗಾಮಿ ದಾಳಿಯು ಸಾವು ಮತ್ತು ನೋವಿನ ಜಾಡನ್ನು ಬಿಟ್ಟಿದೆ.
ಶೋಪಿಯಾನ್ನಲ್ಲಿ ನಡೆದ ಉಗ್ರಗಾಮಿ ದಾಳಿಯನ್ನು ನಾನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ, ಇದರಲ್ಲಿ ಸುನೀಲ್ ಕುಮಾರ್ ಸಾವನ್ನಪ್ಪಿದ್ದಾರೆ ಮತ್ತು ಪಿಂಟೋ ಕುಮಾರ್ ಗಾಯಗೊಂಡಿದ್ದಾರೆ. ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಹೇಳಿದ್ದಾರೆ.