ಜಮ್ಮು ಮತ್ತು ಕಾಶ್ಮೀರದಲ್ಲಿ(Jammu & Kashmir) ಸರಕಾರಿ ಅಧಿಕಾರಿ ರಾಹುಲ್ ಭಟ್(Rahul Bhat) ಭಯೋತ್ಪಾದಕರಿಂದ(Terrorists) ಹತ್ಯೆಯಾದ ನಂತರ ಕಣಿವೆ ರಾಜ್ಯದಲ್ಲಿ ಅಶಾಂತಿ ಭುಗಿಲೆದ್ದಿದೆ.

ಇದೀಗ ಮತ್ತೆ ಪಂಡಿತರನ್ನು ಕಾಶ್ಮೀರದಿಂದ ಹೊರಹಾಕುವ ವ್ಯವಸ್ಥಿತ ಪಿತೂರಿ ರೂಪಗೊಳ್ಳುತ್ತಿದೆ. “ಕಾಶ್ಮೀರ ಬಿಟ್ಟು ತೊಲಗಿ, ಇಲ್ಲದಿದ್ದರೆ ಹೆಣವಾಗುವಿರಿ” ಎಂದು ಕಾಶ್ಮೀರಿ ಪಂಡಿತರಿಗೆ ಕೊಲೆ ಬೆದರಿಕೆ ಹಾಕುವ ಮೂಲಕ, ಪಂಡಿತರನ್ನು ಕಣಿವೆಯಿಂದ ಹೊರಹಾಕುವ ಪ್ರಯತ್ನ ನಡೆದಿದೆ. ಇನ್ನು ರಾಹುಲ್ ಭಟ್ ಅವರ ಕೊಲೆ ಖಂಡಿಸಿ ಕಾಶ್ಮೀರಿ ಪಂಡಿತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ನಿರಾಶ್ರಿತರ ಕಾಲೊನಿಯ ಅಧ್ಯಕ್ಷರಿಗೆ ಪತ್ರ ಬರೆದಿರುವ ಲಶ್ಕರೆ ಇಸ್ಲಾಮ್ ಎಂಬ ಭಯೋತ್ಪಾದಕ ಸಂಘಟನೆ,
“ವಲಸಿಗರೇ ಮತ್ತು ಆರ್‍ಎಸ್‍ಎಸ್ ಏಜೆಂಟರೆ ಜಮ್ಮು-ಕಾಶ್ಮೀರ ಬಿಟ್ಟು ತೊಲಗಿ. ಇಲ್ಲದಿದ್ದರೆ ನೀವು ಕೊಲೆಯಾಗುವಿರಿ. ಕಾಶ್ಮೀರಿ ಮುಸ್ಲಿಮರನ್ನು ಕೊಲ್ಲುವ ಮೂಲಕ ಕಾಶ್ಮೀರವನ್ನು ಮತ್ತೊಂದು ಇಸ್ರೇಲ್ ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಇನ್ನೊಂದೆಡೆ ಅನೇಕ ಕಡೆ ಪಂಡಿತರಿಗೆ ಕಾಶ್ಮೀರದಲ್ಲಿ ಸ್ಥಳವಿಲ್ಲ. ಪಂಡಿತರೇ, ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ದಾಳಿಗೆ ಸಿದ್ಧವಾಗಿರಿ. ನೀವು ಸಾಯುವುದು ಶತಸಿದ್ಧ. ಕಾಶ್ಮೀರ ಎಂದಿಗೂ ನಮ್ಮದೇ. ಈ ನೆಲದ ಮೇಲೆ ನಮಗೆ ಮಾತ್ರ ಹಕ್ಕಿದೆ. ಕೂಡಲೇ ಕಾಶ್ಮೀರ ಬಿಟ್ಟು ತೊಲಗಿ. ಇಲ್ಲದಿದ್ದರೆ, ನಿಮ್ಮ ಪರಿಸ್ಥಿತಿ ಭೀಕರವಾಗಿರಲಿದೆ ಎಂದು ಬೆದರಿಕೆ ಪತ್ರಗಳನ್ನು ಹಂಚಲಾಗಿದೆ.

ಇನ್ನು ಕಾಶ್ಮೀರಿ ಪಂಡಿತರಿಗೆ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಬಂದಿರುವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವಾಲಯ, ಕಣಿವೆ ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ಪಂಡಿತರ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡುವ ಕುರಿತು ಸೇನೆಯ ಅಧಿಕಾರಿಗಳು ಸರಣಿ ಸಭೆಗಳನ್ನು ನಡೆಸಿದ್ದಾರೆ. ಭಯೋತ್ಪಾದಕ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಇಡೀ ಕಾಶ್ಮೀರದಾದ್ಯಂತ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.