ಮೈಸೂರು, ಮಾ. 26: ʻಕಾವೇರಿ ಕೂಗುʼ ಅಭಿಯಾನದಡಿ ಈಗಾಗಲೇ 1.10 ಕೋಟಿ ಸಸಿಗಳನ್ನು ರೈತರ ಜಮೀನಿನಲ್ಲಿ ನೆಡಲಾಗಿದೆ ಎಂದು ಈಶಾ ಪ್ರತಿಷ್ಠಾನದ ಜಗ್ಗಿ ವಾಸುದೇವ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಕಾವೇರಿ ಕೂಗುʼ ಅಭಿಯಾನಕ್ಕೆ ಸ್ವಯಂ ಸೇವಕರು, ರೈತರು ಬಹಳ ಉತ್ಸಾಹದಿಂದ ಭಾಗವಹಿಸಿದ್ದಾರೆ. ಸಸಿ ನೆಡುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಪುರಾತನ ದೇವಾಲಯಗಳ ಬಗ್ಗೆ ಮಾತನಾಡಿದ ಅವರು, ತಮಿಳುನಾಡಿನ 12000 ದೇವಾಲಗಳಲ್ಲಿ ಪೂಜೆ ನೆಡೆಯುತ್ತಿಲ್ಲ. ದೇವಾಲಯದಲ್ಲಿ ಮೂಲ ಮೂರ್ತಿಗಳನ್ನು ಕದ್ದಿದ್ದಾರೆ. ಸರ್ಕಾರ ನಿರ್ಲಕ್ಷ್ಯ ತೊರಿದ್ರೆ ಮುಂದಿನ 50 ವರ್ಷಗಳಲ್ಲಿ ದೇವಾಲಯಗಳು ಇರುವುದಿಲ್ಲ. ದೇವಾಲಯನ್ನು ಬಿಸ್ ನೆಸ್ ಮಾಡಿಕೊಂಡಿದ್ದಾರೆ ಎಂದು ಜಗ್ಗಿ ವಾಸುದೇವ್ ಹೇಳಿದರು.
ಕೊಯಮತ್ತೂರಿನಿಂದ ಮೈಸೂರಿಗೆ ಬೈಕ್‌ನಲ್ಲೇ ಬಂದಿರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಹೌದು.. ಬೈಕ್‌ನಲ್ಲೇ ಬಂದೆ. ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕ ಅಂತರ ಕಾಯ್ದುಕೊಳ್ಳಬೇಕಲ್ಲ ಎಂದರು.
ಇದಕ್ಕೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಮಠದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಬಳಿಕ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಸದ್ಗುರು ಜಗ್ಗಿ ವಾಸುದೇವ್ ಅವರು ಉಭಯ ಕುಶಲೋಪರಿಯಲ್ಲಿ ತೊಡಗಿದರು.
ಈ ಸಂದರ್ಭದಲ್ಲಿ ಮೇಯರ್ ರುಕ್ಮಿಣಿ ಮಾದೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಕೂಡ ಮಠಕ್ಕೆ ಭೇಟಿ ನೀಡಿದ್ದರು.