ಉಡುಪಿ, ಡಿ. 17: ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಸೋನಿ ಟಿವಿಯಲ್ಲಿ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮವಾದ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿ ಅನಾಮಯ ಯೋಗೇಶ್ ದಿವಾಕರ್ ಅವರು ‘ಸ್ಟೂಡೆಂಟ್ ವೀಕ್ ಎಂಡ್ ಸ್ಪೆಷಲ್’ನಲ್ಲಿ ಬುಧವಾರ 14 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ 50 ಲ.ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಹಾಟ್‌ಸೀಟ್‌ನಲ್ಲಿ ಅಮಿತಾಬ್ ಬಚ್ಚನ್ ಕೇಳುವ 15 ಪ್ರಶ್ನೆಗಳ ಈ ಸ್ಪರ್ಧೆಯಲ್ಲಿ ಅನಾಮಯ 14 ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ್ದು 50 ಲಕ್ಷ ರೂ. ಗೆದ್ದಿದ್ದರು. 1 ಕೋಟಿ ರೂ. ಗೆಲ್ಲುವ ಅಂತಿಮ ಪ್ರಶ್ನೆ ಕೇಳಿದಾಗ ಅವರ ಹತ್ತಿರ ಒಂದು ಲೈಫ್‌ಲೈನ್ ಇತ್ತು. ಆದರೆ ಈ ಪ್ರಶ್ನೆಗೆ ಖಚಿತ ಉತ್ತರ ಗೊತ್ತಿಲ್ಲದ ಕಾರಣ ಯಾವುದೇ ಅಪಾಯ ತೆಗೆದು ಕೊಳ್ಳದೇ ಅಲ್ಲಿಗೆ ಆಟ ಮುಗಿಸಲು ನಿರ್ಧರಿಸಿದ್ದಾರೆ. ತಮ್ಮ ಬುದ್ದಿಮತ್ತೆಯಲ್ಲಿ ಈ ಮೂಲಕ ಅವರು ಗೆಲುವನ್ನು ಪಡೆದುಕೊಂಡಿದ್ದಾರೆ.