ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Loksabha Elections) ಅಧಿಕಾರದ ಚುಕ್ಕಾಣಿ ಹಿಡಿಯಲು ಕೆ.ಚಂದ್ರಶೇಖರ್‍ರಾವ್(K Chandrashekar Rao) ತೆರೆಮರೆಯಲ್ಲಿ ರಣತಂತ್ರ ಹೆಣೆಯುತ್ತಿದ್ದಾರೆ.
ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಶೀಲರಾಗಿರುವ ಅವರು ದೇಶದ ಅನೇಕ ಪ್ರಾದೇಶಿಕ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಮಾಜವಾದಿ, ಆಮ್ ಆದ್ಮಿ, ಟಿಎಂಸಿ, ಜೆಡಿಎಸ್, ಎನ್‍ಸಿಪಿ ಸೇರಿದಂತೆ ಅನೇಕ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ, ಒಂದೇ ರಾಜಕೀಯ ವೇದಿಕೆ ನಿರ್ಮಿಸಲು ಸಕಲ ಪ್ರಯತ್ನ ನಡೆಸಿದ್ದಾರೆ. ಕೆ. ಚಂದ್ರಶೇಖರ್‍ರಾವ್ ಅವರು ತಮ್ಮ ಈ ಪ್ರಯತ್ನದ ಭಾಗವಾಗಿ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿ ಮಾಜಿ ಪ್ರಧಾನಿ ದೇವೇಗೌಡರನ್ನು(HD Devegowda) ಭೇಟಿಯಾಗಿ ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.
ತೃತೀಯ ರಂಗ ರಚನೆ ಸಂಬಂಧ ದೇವೇಗೌಡರ ಜೊತೆ ಸುಧಿರ್ಘ ಚರ್ಚೆ ನಡೆದಿದೆ. ದೇಶದ ಎಲ್ಲ ಪ್ರಾದೇಶಿಕ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ದೇವೇಗೌಡರನ್ನು ತೃತೀಯ ರಂಗಕ್ಕೆ ಮಾರ್ಗದರ್ಶಕರನ್ನಾಗಿ ಮಾಡಿಕೊಂಡರೆ ಎಲ್ಲ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಸಾಧಿಸುವುದು ಸುಲಭ ಎನ್ನುವುದು ಕೆಸಿಆರ್ ಲೆಕ್ಕಾಚಾರ. ದೇವೇಗೌಡರ ಮಾರ್ಗದರ್ಶನದಲ್ಲಿ ಮೈತ್ರಿಗೆ ಹೊರಟರೆ ಅನೇಕ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಬಹುದು. ಏಕೆಂದರೆ ದೇವೇಗೌಡರು ಎಲ್ಲರೊಂದಿಗೂ ಸುಲಭವಾಗಿ ಮೈತ್ರಿ ಸಾಧಿಸಬಲ್ಲರು.
ಹೀಗಾಗಿ ಕೆಸಿಆರ್ ದೇವೇಗೌಡರನ್ನು ತೃತೀಯ ರಂಗದ ಭಾಗವಾಗಿಸಲು ರಣತಂತ್ರ ರೂಪಿಸಿದ್ದಾರೆ. ಇನ್ನು ತೃತೀಯ ರಂಗ ದೇವೇಗೌಡರ ಮಾರ್ಗದರ್ಶನದಲ್ಲಿ ರಚನೆಯಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾದರೆ ಪ್ರಾದೇಶಿಕ ಪಕ್ಷಗಳ ಕೈಗೆ ದೇಶದ ಚುಕ್ಕಾಣಿ ಸಿಗಲಿದೆ. 90ರ ಸನಿಹದಲ್ಲಿರುವ ದೇವೇಗೌಡರು ಮತ್ತೆ ಪ್ರಧಾನಿಯಾಗಲಾರರು. ಆಗ ತೃತೀಯ ರಂಗದಲ್ಲಿ ಹೆಚ್ಚು ಸಕ್ರಿಯರಾಗಿರುವ ಕೆಸಿಆರ್‍ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.
ದೇವೇಗೌಡರನ್ನು ಮುಖವಾಣಿಯಾಗಿಸಿಕೊಂಡು ಅಧಿಕಾರದ ಸೂತ್ರ ಹಿಡಿಯುವ ತಂತ್ರವನ್ನು ಕೆಸಿಆರ್ ಹೆಣೆದಿದ್ದಾರೆ. ದೇವೇಗೌಡರ ಹೊರತಾಗಿ ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ವ್ಯಕ್ತಿತ್ವ ಸದ್ಯಕ್ಕೆ ಮತ್ತೊಂದಿಲ್ಲ. ಹೀಗಾಗಿ ತೃತೀಯ ರಂಗ ರಚನೆಗೆ ದೇವೇಗೌಡರು ಅನಿವಾರ್ಯವಾಗಲಿದ್ದಾರೆ ಎಂಬುದು ಕೆಸಿಆರ್ ಲೆಕ್ಕಾಚಾರ.