ಕೇರಳ, ಏ. 29: ಇಲ್ಲಿನ ಮಲಪ್ಪುರಂ ಜಿಲ್ಲೆಯ ನಿಲಂಬೂರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ವಿ. ಪ್ರಕಾಶ್ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಲಪ್ಪುರಂ ಜಿಲ್ಲೆಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ೫೬ ವರ್ಷದ ಪ್ರಕಾಶ್ ಅವರಿಗೆ ಎದೆ ನೋವು ನೋವು ಕಾಣಿಸಿಕೊಂಡ ಕಾರಣ ಮಂಜೇರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಮುಂಜಾನೆ 3 ಗಂಟೆಗೆ ಅವರು ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ. ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಸುಮಾರು ಒಂದು ಗಂಟೆಗಳ ಕಾಲ ಕಾಂಗ್ರೆಸ್ ಕಚೇರಿಯಲ್ಲಿರಿಸಿ, ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಅಂತಿಮ ನಮನ ಸಲ್ಲಿಸಿದ್ದಾರೆ. ಇದಾದ ನಂತರ ಕೊವಿಡ್ ನಿಯಮಾವಳಿಗಳನ್ನು ಪಾಲಿಸಿ ಎಡಕ್ಕರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ನಿಲಂಬೂರ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಪ್ರಕಾಶ್ ಅವರು ಇತ್ತೀಚೆಗೆ ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಚುನಾವಣಾ ಫಲಿತಾಂಶ ಪ್ರಕಟವಾಗಲು ಇನ್ನೇನು ಮೂರು ದಿನಗಳು ಬಾಕಿ ಇರುವಾಗ ಪ್ರಕಾಶ್ ವಿಯೋಗ ಕಾಂಗ್ರೆಸ್ ಪಾಲಿಗೆ ಅತೀವ ದುಃಖವನ್ನುಂಟು ಮಾಡಿದೆ.