ತಿರುವನಂತಪುರ ಅ 18 : ದೇವರ ನಾಡು ಕೇರಳದಲ್ಲಿ ಸುರಿಯುತ್ತಿದ್ದ ರಣ ಮಳೆ ಇದೀಗ ಇಳಿಮುಖ ಕಂಡಿದೆ. ಆದರೆ ಇದರ ಪರಿಣಾಮ ಹಲವೆಡೆ ಭೂ ಕುಸಿತ ಉಂಟಾಗಿದ್ದು, ಕೇಸರಿನ ಅವಶೇಷಗಳಡಿ 26 ಮಂದಿ ಶವ ಪತ್ತೆಯಾಗಿದೆ.
ಹೌದು, ಕಳೆದ ಮೂನ್ನಾಲ್ಕು ದಿನಗಳಿಂದ ಸುರಿದ ಕುಂಭದ್ರೋಣ ಮಳೆಯಿಂದಾಗಿ ಕೇರಳ ತತ್ತರಿಸಿ ಹೋಗಿದೆ. ಈ ಪ್ರಕೃತಿ ವಿಕೋಪ 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಭಯಾನಕ ಸ್ಥಿತಿಯನ್ನು ಮರು ನೆನಪಿಸುತ್ತಿದೆ. ಸದ್ಯ ಕೇರಳದಲ್ಲಿ ಉಂಟಾದ ಪ್ರವಾಹದಿಂದ ಕೊಟ್ಟಾಯಂ, ಇಡುಕ್ಕಿ ಜಿಲ್ಲೆಯಲ್ಲಿ ಭೂಕುಸಿತಗೊಂಡಿದ್ದು, ಕೆಸರಿನ ಅವಶೇಷಗಳಡಿ ಈವರೆಗೂ 26 ಶವ ಪತ್ತೆಯಾಗಿದೆ.
ಪರಸ್ಪರ ಕೈಹಿಡಿದ ಸ್ಥಿತಿಯಲ್ಲಿ ಮೂವರು ಮಕ್ಕಳು ಹಾಗೂ ಮಗುವನ್ನು ತಾಯಿ ತಬ್ಬಿಕೊಂಡಿರುವ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದೆ. ಕೊಟ್ಟಿಕಲ್‍ನಲ್ಲಿಯೇ 13 ಮಂದಿಯ ಶವ ಪತ್ತೆಯಾಗಿದ್ದು,ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಅಲ್ಲದೇ ಪುಲ್ಲುಪಾರದಲ್ಲಿ ಪ್ರವಾಸಕ್ಕೆ ಬಂದಿದ್ದ ಗುಜರಾತ್ ಮೂಲದ ತಂದೆ-ಮಗ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವೇಳೆ ಬಸ್ ಸಿಬ್ಬಂದಿ ರಕ್ಷಿಸಿದ್ದಾರೆ.
ಕೇರಳದಲ್ಲಿ ರಣಭೀಕರ ಮಳೆಯಿಂದಾಗಿ ಪ್ರಳಯವಾಗಿದ್ದು, ಗುಡ್ಡಗಳ ಅಡಿಯಲ್ಲಿರುವ ವಾಸಿಸುತ್ತಿರುವ ಜನರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಸತತ ಮಳೆಯಿಂದಾಗಿ ಮತ್ತೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಇದೀಗ ಹೆಲಿಕಾಪ್ಟರ್ ಮೂಲಕ ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯವನ್ನು ಮುಂದುವರೆಸಿದೆ. ಜೊತೆಗೆ ಕೇರಳದಿಂದ ಬಸ್, ರೈಲು ಸಂಚಾರ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸಿಎಂ ಪಿಣರಾಯಿಗೆ ಪ್ರಧಾನಿ ನೆರವು ನೀಡುವ ಭರವಸೆ ನೀಡಿದ್ದಾರೆ.
ಕೇರಳದಲ್ಲಿ ಮಳೆ ಇಳಿಮುಖ ಆಗಿದ್ದರೂ ಮಳೆ ಸಂಪೂರ್ಣವಾಗಿ ನಿಲ್ಲದ ಕಾರಣ ಶಬರಿ ಮಲೆಯಾತ್ರೆಗೆ ಭಕ್ತರು ಬರದಂತೆ ಕೇರಳ ಸರ್ಕಾರ ಮನೆ ಮನವಿ ಮಾಡಿದೆ. ಹವಾಮಾನ ಇಲಾಖೆ, ಶಬರಿಮಲೆ ಸೇರಿದಂತೆ ಕೇರಳದಲ್ಲಿ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.