ತಿರುವನಂತಪುರಂ, ಮೇ. 19: ಕೇರಳದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರುತ್ತಿರುವ ಪಿಣರಾಯಿ ವಿಜಯನ್ ಮತ್ತು ನೂತನ ಸಚಿವರ ಪ್ರಮಾಣ ವಚನ ನಾಳೆ ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯಲಿದೆ . ಈ ಕಾರ್ಯಕ್ರಮದಲ್ಲಿ 500 ಮಂದಿ ಭಾಗಿಯಾಗುವುದಾಗಿ ಎಲ್ ಡಿಎಫ್ ಹೇಳಿದೆ. ಆದರೆ,ರಾಜ್ಯದಲ್ಲಿ ಕೊವಿಡ್ ಲಾಕ್ ಡೌನ್ ಇರುವಾಗ ಇಷ್ಟೊಂದು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರ ಬಗ್ಗೆ ಟೀಕೆ ಕೇಳಿ ಬಂದಿದೆ. ಪಿಣರಾಯಿ ವಿಜಯನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಇಷ್ಟೊಂದು ಜನರು ಭಾಗಿಯಾಗುತ್ತಿರುವುದು ಅಜಾರೂಕತೆಯ ಕಾರ್ಯ. ಇದಕ್ಕೆ ತಡೆಯೊಡ್ಡಬೇಕು ಎಂದು ಹಿರಿಯ ವಿಜ್ಞಾನಿಯೊಬ್ಬರು ಮಂಗಳವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಜಕಾರಣಿಗಳು ಮತ್ತು ಅಧಿಕಾರದಲ್ಲಿ ಕುಳಿತವರು ಪದೇ ಪದೇ ಲಾಕ್ಡೌನ್ ಮಾನದಂಡಗಳನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಜನರು ತಮ್ಮ ಕಾರ್ಯಗಳಲ್ಲಿ ಭಾಗವಹಿಸದಂತೆ ಮತ್ತು ದೈಹಿಕ ಅಂತರ ಕಾಪಾಡುವಂತೆ ಆದೇಶಿಸುತ್ತಿದ್ದಾರೆ. ಇದು ಬೇಲಿಯೇ ಎದ್ದು ಹೊಲವ ಮೇಯ್ದಂತೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ . ನ್ಯಾಯಲಯ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ನಿವೃತ್ತ ವಿಜ್ಞಾನಿ ಮತ್ತು ಸಾರ್ವಜನಿಕ ನೀತಿ ಕಾರ್ಯಕರ್ತರು ಆಗಿರುವ ಎಂ.ಶಜಹಾನ್ ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.
ಕೊವಿಡ್ ನಿಯಂತ್ರಣಕ್ಕಾಗಿ ಟ್ರಿಪಲ್ ಲಾಕ್ ಲಾಕ್ಡೌನ್ ಹೇರಿರುವ ತಿರುವನಂತಪುರಂನಲ್ಲಿ 500 ಜನರನ್ನು ಸೇರಿಸಿ ಪ್ರಮಾಣ ವಚನ ಸಮಾರಂಭವನ್ನು ನಡೆಸಲು ನಿರ್ಧರಿಸಿರುವುದಕ್ಕೆ ಹೈಕೋರ್ಟ್ ರಾಜ್ಯ ಸರ್ಕಾರದಿಂದ ವಿವರಣೆ ಕೋರಿದೆ. ಅಫಿಡವಿಟ್ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ಸರ್ಕಾರದಿಂದ ವಿವರಣೆ ಕೋರಿದೆ.
ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟದಲ್ಲಿರು ಸಚಿವರಿವರು
- ಪಿಣರಾಯಿ ವಿಜಯನ್ – ಸಾರ್ವಜನಿಕ ಆಡಳಿತ, ಗೃಹ ವ್ಯವಹಾರ, ವಿಜಿಲೆನ್ಸ್, ಐಟಿ ಮತ್ತು ಪರಿಸರ
- ಕೆ.ಎನ್. ಬಾಲಗೋಪಾಲ್- ವಿತ್ತ ಸಚಿವ
- ವೀಣಾ ಜಾರ್ಜ್- ಆರೋಗ್ಯ
- ಪಿ. ರಾಜೀವ್- ಕೈಗಾರಿಕೆ
- ಕೆ.ರಾಧಾಕೃಷ್ಣನ್ – ದೇವಸ್ವಂ, ಸಂಸದೀಯ ವ್ಯವಹಾರ, ಹಿಂದುಳಿದ ಕಲ್ಯಾಣ
- ಆರ್. ಬಿಂದು- ಉನ್ನತ ಶಿಕ್ಷಣ
- ವಿ.ಶಿವಂಕುಟ್ಟಿ – ಶಿಕ್ಷಣ, ಉದ್ಯೋಗ
- ಎಂ.ವಿ. ಗೋವಿಂದನ್- ಸ್ಥಳೀಯ ಸಂಸ್ಧೆ,ಅಬಕಾರಿ
- ಪಿ.ಎ. ಮೊಹಮ್ಮದ್ ರಿಯಾಜ್- ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ
- ವಿ.ಎನ್. ವಾಸವನ್- ಸಹಕಾರ
- ಕೆ. ಕೃಷ್ಣಂಕುಟ್ಟಿ- ವಿದ್ಯುತ್
- ಆಂಟನಿ ರಾಜು- ಸಾರಿಗೆ
- ಎ.ಕೆ. ಶಶೀಂದ್ರನ್ – ಅರಣ್ಯ ಇಲಾಖೆ
- ರೋಶಿ ಅಗಸ್ಟೀನ್- ಜಲಸಂಪನ್ಮೂಲ ಇಲಾಖೆ
- ಅಹ್ಮದ್ ದೇವರ್ ಕೋವಿಲ್- ಬಂದರು
- ಸಜಿ ಚೆರಿಯನ್- ಮೀನುಗಾರಿಕೆ ಮತ್ತು ಸಂಸ್ಕೃತಿ
- ವಿ. ಅಬ್ದುರೆಹಿಮಾನ್ – ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಲಸಿಗ ವ್ಯವಹಾರಗಳು
- ಜೆ.ಚಿಂಜುರಾಣಿ – ಡೈರಿ ಇಲಾಖೆ, ಪಶುಸಂಗೋಪನೆ
- ಕೆ.ರಾಜನ್ – ರೆವೆನ್ಯೂ
- ಪಿ.ಪ್ರಸಾದ್- ಕೃಷಿ
- ಜಿ.ಆರ್.ಅನಿಲ್ – ಸಿವಿಲ್ ಸಪ್ಲೈ