ಏರ್‍ಗನ್(Airgun) ಬಳಸಲು ಅಥವಾ ಅದನ್ನು ಬಳಸಿ ತರಬೇತಿ ನೀಡಲು ಯಾವುದೇ ಲೈಸೆನ್ಸ್(Licence) ಅವಶ್ಯಕತೆ ಇಲ್ಲ. ಎಲ್ಲೂ ಕಾನೂನು ಉಲ್ಲಂಘನೆಯಾಗಿಲ್ಲ. ರಕ್ಷಣೆ ಉದ್ದೇಶದಿಂದ ಯುವಕರು ಏರ್‍ಗನ್ ತರಬೇತಿ ಪಡೆಯುವುದರಲ್ಲಿ ತಪ್ಪೇನಿದೆ ಎಂದು ವಿರಾಜಪೇಟೆ(Virajpete) ಬಿಜೆಪಿ ಶಾಸಕ(BJP MLA) ಕೆ.ಜಿ ಬೋಪಯ್ಯ(KG Boppaiah) ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಕೊಡಗಿನ(Kodagu) ಪೊನ್ನಂಪೇಟೆಯ(Ponnampete) ಸಾಯಿ ಶಂಕರ ಶಾಲೆಯಲ್ಲಿ ಭಜರಂಗದಳ ಸಂಘಟನೆಯವರು ತ್ರಿಶೂಲ ದೀಕ್ಷೆ ಮತ್ತು ಏರ್‍ಗನ್ ತರಬೇತಿ ನೀಡಿದ್ದು ರಾಜ್ಯದೆಲ್ಲೆಡೆ ಭಾರೀ ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ್ದ ಶಾಸಕ ಕೆ.ಜಿ ಬೋಪಯ್ಯ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಉತ್ತರಿಸಿದ ಕೆ.ಜಿ. ಬೋಪಯ್ಯ, ಸಿದ್ದರಾಮಯ್ಯ ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ.
ನಮಗೂ ಮಾತನಾಡುವುದಕ್ಕೆ ಬರುತ್ತೇ. ಸಿದ್ದರಾಮಯ್ಯ ಸಂವಿಧಾನ ಮತ್ತು ಕಾನೂನನ್ನು ತಿಳಿದುಕೊಂಡು ಮಾತನಾಡಬೇಕು. ಸಂಘ ಪರಿವಾರದ ಶಿಬಿರಗಳಲ್ಲಿ ಭಾಗಿಯಾಗಬಾರದು ಅಂತಾ ಕಾನೂನಿದ್ಯಾ? ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪ್ರತಿವರ್ಷ ಈ ರೀತಿಯ ಶಿಬಿರಗಳನ್ನು ರಾಜ್ಯದ ವಿವಿದೆಡೆ ಆಯೋಜಿಸುತ್ತಾರೆ. ಈ ವರ್ಷ ಕೊಡಗಿನಲ್ಲಿ ಆಯೋಜಿಸಿದ್ದಾರೆ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಈ ರೀತಿಯ ಕಾರ್ಯಕ್ರಮಗಳಿಗೆ ಭೇಟಿ ಕೊಡೋದು ನನ್ನ ಹಕ್ಕು ಎಂದರು.

ಇನ್ನು ಸಿದ್ದರಾಮಯ್ಯನವರ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಸಿದ್ದರಾಮಯ್ಯ ಈ ರೀತಿಯ ಹೇಳಿಕೆ ನೀಡುತ್ತಾರೆ. ಅಲ್ಪಸಂಖ್ಯಾತರನ್ನು ಹೇಗೆ ಓಲೈಸಬೇಕು ಎನ್ನುವ ಮೂಲಕವೇ ಸಿದ್ದರಾಮಯ್ಯನವರ ದಿನಚರಿ ಪ್ರಾರಂಭವಾಗುತ್ತದೆ. ಇವರ ಪಕ್ಷದ ಶಾಸಕನ ಮನೆಗೆ ಬೆಂಕಿ ಇಟ್ಟಾಗ ಈ ವ್ಯಕ್ತಿ ಎಲ್ಲಿ ಹೋಗಿದ್ದನೋ? ಈಗ ನಮಗೆ ಸಂವಿಧಾನದ ಪಾಠ ಮಾಡುತ್ತಿದ್ದಾನೆ.
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದಾಗ ಸಂವಿಧಾನ ಇರಲಿಲ್ವಾ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.