`ಖೈಮರಾ’ ಎನ್ನುವುದು ಪ್ರಿಯಾಂಕಾ ನಟನೆಯ ಹೊಸ ಚಿತ್ರ. ಅಂದು ಅಲ್ಲಿ ಉಪೇಂದ್ರ ಕೂಡ ಇದ್ದರು. ಅದಕ್ಕೆ ಕಾರಣ ಮೋಶನ್ ಪೋಸ್ಟರ್ ಬಿಡುಗಡೆ ಕೂಡ ಅವರಿಂದಲೇ ನಡೆದಿತ್ತು. ಚಿತ್ರದಲ್ಲಿ ಪ್ರಿಯಾಂಕಾ ಜೊತೆಗೆ ಪ್ರಿಯಾಮಣಿ, ಛಾಯಾಸಿಂಗ್ ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಅಲ್ಲಿಗೆ ಮಹಿಳಾ ಪ್ರಧಾನ ಎಂದೆನಿಸುವ ಈ ಚಿತ್ರದಲ್ಲಿ ನಿರ್ಮಾಪಕ ಮತಿಯಳಗನ್ ಅವರೇ ನಾಯಕರಾಗಿಯೂ ರಂಗ ಪ್ರವೇಶ ಮಾಡುತ್ತಿದ್ದಾರೆ.
ಕಲಾವಿದರ ಹೆಸರನ್ನು ಗಮನಿಸಿದಾಗ ಇದು ಬಹುಶಃ ಬಹುಭಾಷಾ ಪ್ರೇಕ್ಷಕರನ್ನು ಗುರಿಯಾಗಿಸಿರುವ ಚಿತ್ರ ಎನ್ನುವ ಗುಮಾನಿ ಮೂಡುವುದು ಸಹಜ. ಆದರೆ ಇದು ಪ್ರಸ್ತುತ ಕನ್ನಡದಲ್ಲಿ ಮಾತ್ರ ತಯಾರಾಗುತ್ತಿರುವ ಚಿತ್ರ ಎಂದು ನಿರ್ದೇಶಕ ಗೌತಮ್ ವಿ ಪಿಯವರು ತಿಳಿಸಿದ್ದಾರೆ. ಗೌತಮ್ ಅವರ ದೊಡ್ಡಪ್ಪ ಕನ್ನಡದಲ್ಲಿಯೂ ಜನಪ್ರಿಯ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ಪಿ ವಾಸು ಎನ್ನುವುದು ಗಮನಾರ್ಹ ವಿಚಾರ. ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ ಉಪೇಂದ್ರ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಪ್ರಿಯಾಮಣಿಯವರು ಪರದೆಯ ಮೇಲೆ ಕಾಣಿಸಿಕೊಂಡು ಈ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಯಾಚಿಸಿದರು.
ಅಂದಹಾಗೆ ಚಿತ್ರಕ್ಕೆ ನೀಡಲಾಗಿರುವ ಶೀರ್ಷಿಕೆ ಖೈಮರಾ' ಎನ್ನುವುದಕ್ಕೆ ಕನ್ನಡದಲ್ಲಿ ಯಾವುದೇ ಅರ್ಥಗಳಿಲ್ಲ. ಆದರೆ ಚಿತ್ರ ನೋಡಿದ ಬಳಿಕ ನಿಮಗೊಂದು ಅರ್ಥ ದೊರೆಯಲಿದೆ ಎಂದು ನಿರ್ದೇಶಕ ಗೌತಮ್ ಅವರು ಅಭಿಪ್ರಾಯಪಟ್ಟರು. ಕತೆ ಕೇಳಿದಾಗ ನನಗೆ ತುಂಬಾನೇ ಇಷ್ಟವಾಯ್ತು. ಅದರಲ್ಲಿಯೂ ಛಾಯಾಸಿಂಗ್ ಮತ್ತು ಪ್ರಿಯಾಮಣಿಯವರೊಡನೆ ಪರದೆ ಹಂಚಿಕೊಳ್ಳುವುದು ತುಂಬ ಖುಷಿಯಾಗಿದೆ ಎಂದರು. ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, "ಇಪ್ಪತ್ತು ವರ್ಷಗಳ ಹಿಂದೆ ಪ್ರಿಯಾಂಕಾ ಅವರ ತೆಲುಗು ಚಿತ್ರವಾದ
ರಾ’ ಎನ್ನುವ ಸಿನಿಮಾಗೆ ನಾನು ಸಂಗೀತ ನೀಡಿದ್ದೆ. ಇದೀಗ ಎರಡು ದಶಕಗಳ ಬಳಿಕ ಮತ್ತೆ ಜೊತೆ ಸೇರುವ ಸಂದರ್ಭ ಬಂದಿದೆ ಎಂದರು. ಈ ಸಂದರ್ಭದಲ್ಲಿ ನಿರ್ಮಾಪಕರು ಪ್ರಿಯಾಂಕಾ ಅವರಿಗೆ ಲೇಡಿ ಮೆಗಾ ಸ್ಟಾರ್ ಎಂದು ಬಿರುದು ನೀಡಿದರು.