Rajasthan: ಮದುವೆಗೆ ಹೋಗುವ ಸಡಗರದಲ್ಲಿ ದಂಪತಿಗಳು ಮಗುವನ್ನು ಕಾರಲ್ಲಿ ಮರೆತು ಹೋಗಿದ್ದು, ಈ ದಂಪತಿಗಳು ಹಿಂದಿರುಗುಷ್ಟರಲ್ಲಿ ಹೆಣ್ಣು ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಮೃತ ಮಗುವಿನ ಹೆಸರು ಗೋರ್ವಿಕ ನಗರ್ (Gorvika Nagar) ಎಂದಾಗಿದ್ದು ವಯಸ್ಸು ಮೂರು ವರ್ಷವಾಗಿತ್ತು.
ಈ ಮಗುವಿನ ತಂದೆ ಪ್ರದೀಪ್ ನಗರ್ (Pradeep Nagar) ಅವರು ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಮದುವೆ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಮದುವೆ ಮನೆ ಸ್ಥಳಕ್ಕೆ ಬರುತ್ತಿದ್ದಂತೆ ತಾಯಿ ಮತ್ತು ಹಿರಿಯ ಮಗಳು ಕಾರಿನಿಂದ ಹೊರ ಬಂದರು. ನಂತರ ಪ್ರದೀಪ್ ನಗರ್, ಕಾರು ಪಾರ್ಕ್ ಮಾಡಲು ತೆರಳಿದರು. ಇಬ್ಬರು ಹೆಣ್ಣು ಮಕ್ಕಳು ತಮ್ಮ ತಾಯಿಯೊಂದಿಗೆ ಒಳಗೆ ಹೋಗಿದ್ದಾರೆ ಎಂದು ಭಾವಿಸಿ ತಂದೆ ಕಾರನ್ನು ಲಾಕ್ ಮಾಡಿ ಸಮಾರಂಭಕ್ಕೆ ತೆರಳಿದರು.
ತಂದೆ ಜೊತೆ ಮಗಳು ಬರುತ್ತಾಳೆ ಎಂದು ತಾಯಿ ಅಂದುಕೊಂಡಿದ್ದರು. ಸುಮಾರು 2 ಗಂಟೆಗಳ ಕಾಲ ಇಬ್ಬರು ವಿವಿಧ ಸಂಬಂಧಿಕರನ್ನು ಭೇಟಿಯಾದಾಗ ಅದರಲ್ಲಿ ಒಬ್ಬರು ಕಿರಿಯ ಮಗಳ ಬಗ್ಗೆ ವಿಚಾರಿಸಿದರು. ಆಗ ಮಗು ಇಬ್ಬರೊಂದಿಗೂ ಇಲ್ಲ ಅನ್ನೋದು ಗೊತ್ತಾಗಿ ಹುಡುಕಾಟ ಆರಂಭಿಸಿದರು. ಬಳಿಕ ಮಗುವನ್ನು ಹುಡುಕುತ್ತಾ ಕಾರಿನ (Car) ಬಳಿಗೆ ಬಂದಾಗ ಮಗು ಸಾವಿಗಿಡಾಗಿರುವುದು ಗೊತ್ತಾಗಿದೆ.