ದೇಶದಾದ್ಯಂತ ಇಂಡಿಯಾ (INDIA) ಮರು ನಾಮಕರಣ ಪರ-ವಿರೋಧದ ಚರ್ಚೆ ಎಲ್ಲೆಡೆ ತೀವ್ರವಾಗಿದ್ದು, ಇದರ ಕುರಿತು ಹಲವಾರು ಗಣ್ಯರು, ಚಿತ್ರನಟರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ನಟ ಕಿಶೋರ್ (Kishor) ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ‘ದ್ವೇಷದ ಜ್ವಾಲೆ ಹರಡುತ್ತಾ, ಹರಡುತ್ತಾ ದೇಶದ ಹೆಸರಿನವರೆಗೂ ಬಂದಿರುವುದು ದೊಡ್ಡ ದುರಂತ’ವೆಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ನಮ್ಮ ದೇಶದ ಪ್ರಧಾನಿ ಕೀಲಿ ಕೊಟ್ಟ ಗೊಂಬೆಯಂತೆ ಆಡುವ ಆತ ಬಿಟ್ಟು ಪ್ರಬುದ್ಧರಂತೆ ವರ್ತಿಸಲು ಸಾಧ್ಯವಿಲ್ಲವೇ ? ಇಷ್ಟು ದಿನ ಕಾಣಿಸದ ಬ್ರಿಟಿಷ್ ಪ್ರಭಾವವು , ವಿರೋಧಿ ಪಕ್ಷದ ಮೈತ್ರಿಕೂಟ I.N.D.I.A ಅಂತ ಹೆಸರಿಟ್ಟುಕೊಂಡ ಕೂಡಲೇ ಕಂಡಿರುವುದೇಕೆ? ಅದಾನಿಯ ಭ್ರಷ್ಟಾಚಾರದ ಸಾಕ್ಷಿಗಳು ಬಯಲಾದೊಡನೆ ಈ ವಿಚಾರ ಮುನ್ನಲೆಗೆ ಬಂತಾ ? ಜಿಂಪಿಂಗ್, ಪುಟಿನ್ (Putin) ದೆಹಲಿಯ ಜಿ20 ಯಿಂದ ಕೈತೊಳೆದುಕೊಂಡು 56 ಇಂಚಿನ ಬಡಾಯಿಯನ್ನು ಠುಸ್ ಮಾಡಿದೊಡನೆ ಕಂಡದ್ದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ನಿಜವಾದ ಸಮಸ್ಯೆಗಳಿಂದ ಅಥವಾ ಇನ್ನ್ಯಾವುದೋ ಭಯಂಕರ ಷಡ್ಯಂತ್ರದಿಂದ ಎಲ್ಲರ ಗಮನವನ್ನು ಬೇರೆಡೆಗೆ ತಿರುಚುವ ಚಾರ್ಚೊತ್ಪಾದನೆಯ ರಾಜಕೀಯಕ್ಕೆ ಬಲಿಯಾಗಬೇಕೇ? ಹೆಸರು ಬದಲಾದ ಮಾತ್ರಕ್ಕೆ ಮಣಿಪುರದ ಅತ್ಯಾಚಾರಗಳು, ಕೊಲೆಗಳು ಬದಲಾಗುತ್ತದೆಯೇ? ಕಾಶ್ಮೀರ ಶಾಂತವಾಗುತ್ತದೆಯೇ ? ರೈತರ ಆತ್ಮಹತ್ಯೆಗಳು ನಿಲ್ಲುತ್ತವೆಯೇ? ನಿರೋದ್ಯೋಗ ಸಮಸ್ಯೆಗಳು ಸರಿಯಾಗುತ್ತದೆಯೇ? ಪೆಟ್ರೋಲ್ (Petrol) ಕಮ್ಮಿ ಬೆಳೆಗೆ ಸಿಗುತ್ತದೆಯೇ? ಅಷ್ಟೇ ಅಲ್ಲದೆ ದಿನಬಳಕೆಯ ವಸ್ತುಗಳ ಬೆಲೆ ಇಳಿಯುತ್ತದೆಯೇ? ಎಂದೆಲ್ಲಾ ಪ್ರಶ್ನೆಗಳನ್ನು ಮಾಡಿದ್ದಾರೆ.

ಈ ಆಡಳಿತ ಪಕ್ಷದ ಕ್ಷುಲ್ಲಕ ಅಹಂಗೆ ಮತ್ತು ಅಪಾಯಕಾರಿ ರಾಜಕಾರಣಕ್ಕೆ ನಮ್ಮ ವಿವೇಚನೆಯನ್ನು ಬಲಿ ಕೊಡಬೇಕಾ? ನಮ್ಮೆಲ್ಲರ ಅಮೂಲ್ಯ ಸಮಯವನ್ನು ಅರ್ಥಹೀನ ಚರ್ಚೆಯಲ್ಲಿ ವ್ಯರ್ಥ ಮಾಡಿಕೊಳ್ಳಬೇಕೆ? ಎಂದು ನಟ ಕಿಶೋರ್ ಅವರು ಕೇಳಿರುವುದಲ್ಲದೆ ಸುಮಾರು 4ನೇ ಶತಮಾನದಿಂದಲೇ ಬ್ರಿಟಿಷರು ಬರುವುದಕ್ಕೆ ಮುನ್ನ ಇರುವ ಹೆಸರನ್ನು ಬ್ರಿಟಿಷರ ನೆಪದಲ್ಲಿ ಬದಲಾಯಿಸುವ ಹೊರಟಿರುವ ಈ ಧೂರ್ತ ಶಿಖಾಮಣಿಗಳು ನಿಜವಾಗಿ ಬ್ರಿಟಿಷರ ಕೊಡುಗೆಯಾದ ಇಂಗ್ಲಿಷ್ ಭಾಷೆಯ ಬಳಕೆಯನ್ನು ತೆಗೆದು ಬಿಡುತ್ತಾರೆಯೇ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಮಾಡಿರುವ ಅವರು ಯೋಚಿಸಿ…… ಗತಕಾಲದಲ್ಲಿ ಬಾಳುವುದನ್ನು ಬಿಟ್ಟು ವಿವೇಕಮತಿಗಳಾಗುವ ಹಾಗೂ ನಿರಂಕುಶಮತಿಗಳಾಗುವ ಎನ್ನುವ ಕರೆಯನ್ನು ನೀಡಿದ್ದಾರೆ.
ಭವ್ಯಶ್ರೀ ಆರ್.ಜೆ