“ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ” ಎಂಬುದು ಗಾದೆ. ಸಾಮಾನ್ಯವಾಗಿ ಪ್ರಾಣಿಗಳಿಗೆ ತಮ್ಮ ಹೊಟ್ಟೆಪಾಡಿನ ಹೊರತಾಗಿ ಬೇರೆ ಚಿಂತೆ ಇರುವುದಿಲ್ಲವಾದುದರಿಂದ ಇವು ಸುಖವಾಗಿಯೇ ನಿದ್ದೆ ಮಾಡುತ್ತವೆ. ಕೆಲವೊಮ್ಮೆ ಬೀದಿ ಬದಿಯಲ್ಲಿ ಗೌಜಿ ಗದ್ದಲದ ನಡುವೆಯೂ ಸುಖವಾಗಿ ನಿದ್ದೆ ಮಾಡುವ ನಾಯಿ ಬೆಕ್ಕುಗಳನ್ನು ನೋಡಿದಾಗ ನಿದ್ದೆಯ ಮಟ್ಟಿಗೆ ಇವು ಅದೃಷ್ಟಶಾಲಿಗಳು ಎಂದು ಹೊಟ್ಟೆಕಿಚ್ಚು ಪಡುವಂತಾಗುತ್ತದೆ.

ಆದರೆ, ವಾಸ್ತವವಾಗಿ ಮನುಷ್ಯರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಪ್ರಾಣಿಗಳೆಲ್ಲವೂ ತಮ್ಮ ವೇಳಾಪಟ್ಟಿಯ ಪ್ರಕಾರ ನಿರುಮ್ಮಳವಾಗಿ ನಿದ್ರಿಸುತ್ತವೆ. ಆದರೆ ಮನುಷ್ಯರಿಗೆ ನಿತ್ಯದ ಹಲವು ಒತ್ತಡಗಳು ಹಲವಾರು ರೀತಿಯಲ್ಲಿ ನಿದ್ದೆಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾದರೆ, ಯಾವ ಪ್ರಾಣಿ ಅತಿ ಹೆಚ್ಚು ಕಾಲ ನಿದ್ರಿಸುತ್ತದೆ ಎಂಬ ಅಚ್ಚರಿಯ ಮಾಹಿತಿಯನ್ನು ನೋಡೋಣ. ದಿನದ ಅತಿ ಹೆಚ್ಚು ಕಾಲ ಮಲಗುವ ಪ್ರಾಣಿ(Animal) ಎಂದರೆ ಕಾಡುಪಾಪ ಅಥವಾ ಕೊವಾಲಾ ಕರಡಿ(Koala Bears). ಈ ಪ್ರಾಣಿ ದಿನದ ಇಪ್ಪತ್ತೆರಡು ಗಂಟೆಗಳ ಕಾಲ ನಿದ್ರಿಸಬಲ್ಲದು. ಅಂದರೆ ದಿನದ 91.7% ರಷ್ಟು ಕಾಲ!
ಬೃಹತ್ ಆರ್ಮಡಿಲ್ಲೋ : ಕೆಲವೊಮ್ಮೆ ಇಡೀ ದಿನ, ಕೆಲವೊಮ್ಮೆ ಮುಕ್ಕಾಲು ದಿನ ಮಲಗುವ ಈ ಪ್ರಾಣಿಯ ಸರಾಸರಿ ಮಲಗುವ ಸಮಯ ದಿನಕ್ಕೆ 18.1 ಗಂಟೆಗಳು, ಅಂದರೆ 75.4% ರಷ್ಟು ಸಮಯ. ಒಪ್ಪೋಸಮ್ : ಒಂದು ವೇಳೆ ಮುಳ್ಳುಹಂದಿಯ ಮುಳ್ಳುಗಳನ್ನು ತೆಗೆದು, ಬಿಳಿನರಿಯ ಮುಖ ತೊಡಿಸಿದರೆ ಹೇಗಿರುತ್ತದೆಯೋ ಹಾಗೇ ಕಾಣುವ ಓಪ್ಪೋಸಮ್ ಸಹಾ ದಿನದ ಹದಿನೆಂಟು ಗಂಟೆಗಳ ಕಾಲ ನಿದ್ರಿಸುತ್ತದೆ. ಅಂದರೆ ದಿನದ 70% ಸಮಯ.

ಇನ್ನು, ದಿನವಿಡೀ ಚೂಟಿಯಾಗಿ ಓಡಾಡುವ ಪುಟ್ಟ ಅಳಿಲು ಸಹಾ ದಿನದ 14.9 ಗಂಟೆ ಅಂದರೆ 62% ರಷ್ಟು ಸಮಯವನ್ನು ಮಲಗುವ ಮೂಲಕವೇ ಕಳೆಯುತ್ತದೆ.
- ಪವಿತ್ರ