ಪ್ರೊ. ನಂಜುಂಡಸ್ವಾಮಿ ಅವರು ಕಟ್ಟಿರುವ ರೈತ ಸಂಘದಲ್ಲಿ ನಾನು ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ನಮ್ಮ ರೈತಸಂಘದ ಎಲ್ಲ ಪದಾಧಿಕಾರಿಗಳ ಮತ್ತು ರೈತರ ಬೆಂಬಲ ನನಗಿದೆ. ನನ್ನನ್ನು ಅಧ್ಯಕ್ಷ(President) ಸ್ಥಾನದಿಂದ ಕೆಳಗಿಳಿಸುವ ಅಧಿಕಾರ ಇರುವುದು ರೈತರಿಗೆ ಮಾತ್ರ. ಹೀಗಾಗಿ ನಾನೇ ರೈತಸಂಘದ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್(Kodihalli Chandrashekar) ಹೇಳಿದ್ದಾರೆ.
ಬೆಂಗಳೂರಿನಲ್ಲಿ(Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ(Shivmoga) ಸಭೆ ನಡೆಸಿದವರಿಗೂ ನಮ್ಮ ರೈತ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಅಧಿಕಾರ ಅವರಿಗಿಲ್ಲ. ಶಿವಮೊಗ್ಗದಲ್ಲಿ ಸಭೆ ನಡೆದಿರುವುದು ಸಾಮೂಹಿಕ ನಾಯಕತ್ವದ ರೈತ ಸಂಘದ್ದು, ಅವರಿಗೂ ನಮ್ಮ ಸಂಘಟನೆಗೂ ಸಂಬಂಧವಿಲ್ಲ. ಅವರು ನಮ್ಮ ನಾಯಕರಲ್ಲ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಲು ಅವರ್ಯಾರು ಎಂದು ಪ್ರಶ್ನಿಸಿದರು.

ಇನ್ನು ನಾನು ಪ್ರೊ. ನಂಜುಂಡಸ್ವಾಮಿ ಅವರು ಕಟ್ಟಿದ್ದ ರೈತಸಂಘದ ಅಧ್ಯಕ್ಷನಾಗಿದ್ದೇನೆ. ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ನಾನು ಒಬ್ಬನಾಗಿದ್ದೇನೆ. ನಾನು ತಪ್ಪು ಮಾಡಿದ್ದೇನೆ ಎಂದು ಆರೋಪಿಸಲಾಗಿದೆ. ಅದನ್ನು ಸಾಬೀತುಪಡಿಸಬೇಕು. ಆರೋಪ ಮಾಡಿದ ತಕ್ಷಣ ಅಪರಾಧಿಯಾಗುವುದಿಲ್ಲ. ನಾನು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಅಧಿಕಾರ ದುರ್ಬಳಕೆ ಸಾಬೀತಾದರೆ ನಾನು ಚಳುವಳಿಗಳಲ್ಲಿ ಭಾಗವಹಿಸುವುದಿಲ್ಲ. ಮುಂದೆಂದೂ ಹಸಿರು ಶಾಲು ಧರಿಸುವುದಿಲ್ಲ.
ಇನ್ನು ಮೇಲೆ ಕೇಳಿ ಬಂದಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.