2023ರಲ್ಲಿ ನಡೆಯುವ ರಾಜ್ಯ(State) ವಿಧಾನಸಭಾ ಚುನಾವಣೆಯಲ್ಲಿ(Vidhansabha Election) ರಾಜ್ಯ ರೈತ ಸಂಘದ ರಾಜಕೀಯ ಮುಖವಾಣಿಯಾಗಿ ಕರ್ನಾಟಕದ ಆಮ್ ಆದ್ಮಿ ಪಕ್ಷ(Aam Admi Party) ಕೆಲಸ ಮಾಡಲಿದೆ.
ಆಮ್ ಆದ್ಮಿ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ರೈತ ಸಂಘ ಶ್ರಮಿಸಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್(Kodihalli Chandrashekar) ತಿಳಿಸಿದ್ದಾರೆ.

ಬೆಂಗಳೂರಿನ(Bengaluru) ನ್ಯಾಷನಲ್ ಕಾಲೇಜು(National College) ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸೌದವನ್ನು ಶುದ್ದೀಕರಿಸಲು ರಾಜಕೀಯ ಬದಲಾವಣೆಯ ಅಗತ್ಯವಿದೆ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದ ಚುನಾವಣೆಯ ಅಸ್ತ್ರ ಪೊರಕೆ. ರಾಜ್ಯದಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ಕಿತ್ತೆಸೆಯಲು ಪೊರಕೆಯನ್ನು ರೈತ ಸಂಘ ಬಳಸಿಕೊಳ್ಳಲಿದೆ. ಆದರೆ ರೈತ ಸಂಘವೂ ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡಲಿದ್ದು, ನಮ್ಮ ಕಾರ್ಯಕರ್ತರು ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಿದ್ದಾರೆ ಎಂದು ಘೋಷಿಸಿದರು.
ಇನ್ನು ಕರ್ನಾಟಕದಲ್ಲಿ ಮೂರು ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಹೊಸ ರಾಜಕೀಯ ಶಕ್ತಿಯ ಅವಶ್ಯಕತೆಯಿದೆ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವುದು ತುರ್ತು ಅಗತ್ಯವಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರವನ್ನು ಮೈಗೂಡಿಸಿಕೊಂಡಿವೆ. ಬಿಜೆಪಿ ಆಡಳಿತವಿರುವ ಯಾವ ರಾಜ್ಯ ಭ್ರಷ್ಟಾಚಾರ ಮುಕ್ತವಾಗಿದೆ? ಒಂದಾದರೂ ಉದಾಹರಣೆ ಇದೆಯಾ? ಕರ್ನಾಟಕದಲ್ಲಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶೇ.40 ಕಮಿಷನ್ ಪಡೆಯುವುದೇ ದೊಡ್ಡ ಸಾಧನೆಯಾಗಿದೆ.
