ಬೆಂಗಳೂರು, ಏ. 15: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ನಡುವೆ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ಹರಸಾಹಸ ಪಡೆತ್ತಿದೆ. ಈ ನಡುವೆ ರಾಜ್ಯ ರಾಜಧಾನಿಯಲ್ಲಿ ಕೊರೊನಾ ಆರ್ಭಟ ಜೋರಾಗಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ 25 ಕೋವಿಡ್ ಕೇರ್ ಸೆಂಟರ್ ಗಳ ತೆರಯಲು ಸರ್ಕಾರಿ ಮತ್ತು ಪಾಲಿಕೆ ಜಾಗಗಳಲ್ಲಿ ಬಿಬಿಎಂಪಿ ಮುಂದಾಗಿದೆ.
ಬಿಬಿಎಂಪಿಯ ಸಮುದಾಯ ಭವನ, ಸರ್ಕಾರದ ಕಟ್ಟಡಗಳು, ಪಾಲಿಕೆ ಕಲ್ಯಾಣ ಮಂಟಪಗಳಲ್ಲಿ ಕೇರ್ ಸೆಂಟರ್ ಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ಕಳೆದ ಬಾರಿ ಖಾಸಗಿ ಜಾಗಗಳಲ್ಲಿ ಕೋವಿಡ್ ಕೇರ್ ಸೆಂಟರ್ಸ್ ಆರಂಭಿಸಿ ದುಬಾರಿ ವೆಚ್ಚ ಭರಿಸಿದ್ದ ಪಾಲಿಕೆ ಈ ಬಾರಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಬಿಎಂಪಿ ಈ ನಿರ್ಧಾರ ಮಾಡಿದೆ.
ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 800 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಗಳು ಕಾರ್ಯ ನಿರ್ವಹಿಸುತ್ತಿವೆ. 1500 ಬೆಡ್ ಗಳ ಲಭ್ಯತೆ ಇರುವ 10 ಕೋವಿಡ್ ಕೇರ್ ಸೆಂಟರ್ ಗಳನ್ನ ತೆರೆಯಲು ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ನಂತರದ ಹಂತದಲ್ಲಿ ಮತ್ತೆ 10 ಕೋವಿಡ್ ಕೇರ್ ಸೆಂಟರ್ಗಳು ಆರಂಭವಾಗಲಿವೆ. ಬಿಬಿಎಂಪಿ ಒಟ್ಟು 25 ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸೋಂಕು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕೇರ್ ಸೆಂಟರ್ ಮೊದಲು ಆರಂಭವಾಗಲಿವೆ.