Koti Movie Release: ಧನಂಜಯ್ ‘ಕೋಟಿ’ (Kotee) ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಕೋಟಿಯ ಈ ಪಯಣದ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ಜೂನ್ (June) 14ಕ್ಕೆ ಬಿಡುಗಡೆಯಾಗಲಿದೆ. ಇದೀಗ ಇದೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಮತ್ತು ಒಂದಷ್ಟು ಕುತೂಹಲವನ್ನೂ ಕೆರಳಿಸಿದೆ ಕೋಟಿ ಸಿನಿಮಾ.
ಧನಂಜಯ (Dhananjaya) ಅವರ ಸಾಮಾನ್ಯ ವ್ಯಕ್ತಿಯ ಗೆಟಪ್, ರಮೇಶ್ ಇಂದಿರಾ ಅವರ ನಟೋರಿಯಸ್ ವಿಲನ್ ಪಾತ್ರ, ತಾರಾ ಅವರ ತಾಯಿಯ ಪಾತ್ರ, ಕ್ವಾಲಿಟಿ ವಿಶುವಲ್ಸ್, ಮತ್ತೆ ಮತ್ತೆ ಕೇಳಬೇಕೆನಿಸುವ ಹಿನ್ನೆಲೆ ಸಂಗೀತ, ಹುಲಿವೇಷ – ಇವೆಲ್ಲವು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆದವು. ನಾಯಕ ನಟ ಡಾಲಿ ಧನಂಜಯ “ಇದೊಂದು ಮಿಡಲ್ ಕ್ಲಾಸ್ (Middle Class) ಸಾಮಾನ್ಯ ವ್ಯಕ್ತಿಯ ಕತೆ. ಇದು ಎಲ್ಲರಿಗೂ ಕನೆಕ್ಟ್ ಆಗುವ ಫ್ಯಾಮಿಲಿ ಎಂಟರ್ಟೈನರ್ (Family Entertainer)” ಎಂದು ಹೇಳಿದರು.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಪರಮ್ “ಇದೊಂದು ಕಂಟೆಂಟ್ ಇರುವ ಕಮರ್ಷಿಯಲ್ ಸಿನಿಮಾ. ಒಂದೊಳ್ಳೆ ಕತೆ, ಒಳ್ಳೆ ಮನರಂಜನೆ ಗ್ಯಾರಂಟಿ” ಎಂದರು. ಅಪ್ಪಟ ಕನ್ನಡ ಮಣ್ಣಿನ ಕತೆಯಾದ ಕೋಟಿ ಈಗಾಗಲೇ ಟೀಸರ್ ಮತ್ತು ಹಾಡುಗಳ ಮುಖಾಂತರ ಸದ್ದು ಮಾಡುತ್ತಿದೆ. ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ‘ಕೋಟಿ’ ಗೆಲ್ಲುವ ಭರವಸೆಯಾಗಿ ಕಂಡಿದೆ.
ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್ (Tanuja Venkatesh, Abhishek Srikanth) ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ (Vasuki Vaibhav) ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ (Kanthara) ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.
ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ (Jio Studios) ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಚಿತ್ರ ಜೂನ್ (June) 14ರಂದು ತೆರೆ ಕಾಣಲಿದೆ.
✍🏻ವೀರಾಜ್ ಸ್ವಾಮಿ