ದೆಹಲಿ, ಏ. 26: ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ ನೀಡಲಾಗುವುದು. ಲಸಿಕೆ ವಿತರಣೆ ಶನಿವಾರದಿಂದ ಆರಂಭವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೂ ಕೊವಿಡ್ ಲಸಿಕೆ ಉಚಿತವಾಗಿ ನೀಡಲು ದೆಹಲಿ ಸರ್ಕಾರ ತೀರ್ಮಾನಿಸಿದೆ. ನಾವು ಇವತ್ತು 1.34 ಕೋಟಿ ಲಸಿಕೆ ಖರೀದಿಸಲು ಅನುಮತಿ ನೀಡಿದ್ದೇವೆ. ಖರೀದಿಸಿದ ಲಸಿಕೆಗಳು ಶೀಘ್ರದಲ್ಲಿಯೇ ಜನರಿಗೆ ವಿತರಣೆಯಾಗುವಂತೆ ನಾವು ಪ್ರಯತ್ನಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತ ಲಸಿಕೆ ಲಭ್ಯ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯ ಬಯಸುವವರು ಲಸಿಕೆಗೆ ಹಣ ಪಾವತಿ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರಗಳಿಗೆ ನೀಡುವ ಲಸಿಕೆ ಬೆಲೆಯನ್ನು ಕಡಿಮೆ ಮಾಡಿ ಎಂದು ಕೇಜ್ರಿವಾಲ್ ಲಸಿಕೆ ಉತ್ಪಾದಕರಲ್ಲಿ ಮನವಿ ಮಾಡಿದ್ದಾರೆ.
ಒಂದು ಡೋಸ್ ಲಸಿಕೆಯ ಬೆಲೆಯನ್ನು ರೂ 150ಕ್ಕೆ ಇಳಿಸಿ ಎಂದು ನಾನು ಲಸಿಕೆ ಉತ್ಪಾದಕರಲ್ಲಿ ಮನವಿ ಮಾಡುತ್ತಿದ್ದೇನೆ. ಲಾಭಗಳಿಸಲು ನಿಮಗೆ ಇಡೀ ಜೀವಮಾನವೇ ಉಳಿದಿದೆ. ಜನರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ಲಾಭ ಮಾಡುವ ಕೆಲಸ ಸರಿಯಲ್ಲ. ಕೇಂದ್ರ ಸರ್ಕಾರವು ಈ ಲಸಿಕೆ ದರವನ್ನು ಇಳಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ದೆಹಲಿಯ ಜೊತೆಗೆ ಒರಿಸ್ಸಾ, ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಉಚಿತ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ.