ನವದೆಹಲಿ, ಮೇ. 03: ಭಾರತದಲ್ಲಿ ಪ್ರತಿದಿನ 3 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಕೊವಿಡ್ ಲಸಿಕೆಯ ಕೊರತೆ ಹೆಚ್ಚುತ್ತಿದೆ. ಹೀಗಿರುವಾಗ ದೇಶದಲ್ಲಿ ಕೊವಿಡ್ ಲಸಿಕೆ ಕೊರತೆ ಜುಲೈ ತಿಂಗಳವರೆಗೆ ಮುಂದುವರಿಯಲಿದೆ ಎಂದು ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಧಾರ್ ಪೂನಾವಾಲಾ ಹೇಳಿರುವುದಾಗಿ ವರದಿಯಾಗಿದೆ. ಜುಲೈ ತಿಂಗಳಲ್ಲಿ ಕೊವಿಡ್ ಲಸಿಕೆ ಉತ್ಪಾದನೆ ಹೆಚ್ಚಿಸಲಾಗುವುದು ಎಂದು ಪೂನಾವಾಲಾ ಹೇಳಿದ್ದಾರೆ.
2021 ಜುಲೈ ತಿಂಗಳಲ್ಲಿ ಕೊವಿಡ್ ಲಸಿಕೆಯ ಉತ್ಪಾದನೆ 6-7 ಕೋಟಿ ಡೋಸ್ ನಿಂದ 10 ಕೋಟಿಗೆ ಏರಿಸಲಾಗುವುದು ಎಂದಿದ್ದಾರೆ ಪೂನಾವಾಲಾ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಕೊವಿಡ್ ಲಸಿಕೆ ನೀಡುವ ಅಭಿಯಾನ ಆರಂಭವಾದ ಬೆನ್ನಲ್ಲೇ ಪೂನಾವಾಲಾ ಲಸಿಕೆ ಕೊರತೆ ಕುರಿತು ಈ ರೀತಿ ಹೇಳಿದ್ದಾರೆ.
ಜನವರಿಯಲ್ಲಿ ಕೊವಿಡ್ -19 ಪ್ರಕರಣಗಳು ಕಡಿಮೆಯಾಗಲು ಪ್ರಾರಂಭಿಸಿದಾಗ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಅಪ್ಪಳಿಸಬಹುದೆಂದು ಅಧಿಕಾರಿಗಳು ನಿರೀಕ್ಷಿಸಿರಲಿಲ್ಲ. ಭಾರತದಲ್ಲಿ ಸಾಂಕ್ರಾಮಿಕ ರೋಗವು ಕ್ಷೀಣಿಸಿದೆ ಎಂದೇ ಎಲ್ಲರೂ ಭಾವಿಸಿದ್ದರು. ಉತ್ಪಾದನೆ ಮಾಡಲು ಯಾವುದೇ ಬೇಡಿಕೆ ಇರಲಿಲ್ಲ, ನಾವು ವರ್ಷಕ್ಕೆ 1 ಶತಕೋಟಿಗಿಂತ ಹೆಚ್ಚಿನ ಡೋಸ್ ಉತ್ಪಾದನೆ ಮಾಡಬೇಕಾಗಿದೆ ಎಂದು ನಾವು ಭಾವಿಸಿರಲಿಲ್ಲ ಎಂದು ಪೂನಾವಾಲಾ ಹೇಳಿದ್ದಾರೆ.