ಬೆಂಗಳೂರು, ಡಿ. 3: ಬೆಂಗಳೂರಿನ 13 ವರ್ಷದ ಬಾಲಕಿಯೊಬ್ಬಳು ತನ್ನ ನೆಚ್ಚಿನ ನಟನನ್ನು ನೋಡಲು ಮನೆಯವರಿಗೆ ತಿಳಿಸದೇ ದೆಹಲಿ ರೈಲು ಹತ್ತಿದ್ದಾಳೆ. ಕನ್ನಡ ಟಿವಿ ಚಾನಲ್‌ನಲ್ಲಿ ಪ್ರಸಾವಾಗುತ್ತಿರುವ ‘ರಾಧಾ-ಕೃಷ್ಣ’ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರಕ್ಕೆ ಮಾರುಹೋಗಿ ಆತನನ್ನು ಅರಸಿ ಬೆಂಗಳೂರಿನಿಂದ ಒಂಟಿಯಾಗಿ ದೆಹಲಿಗೆ ಹೋಗಿದ್ದಾಳೆ.
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಬಾಲಕಿಯು ಕೃಷ್ಣನನ್ನು ನೋಡಲೆಂದು ಬೆಂಗಳೂರಿನಲ್ಲಿ ಮನೆ ಬಿಟ್ಟು, ದೆಹಲಿಗೆ ರೈಲು ಹತ್ತಿದ್ದಾಳೆ. ಆಕೆಯ ವರ್ತನೆ, ಆಕೆಯ ಬಳಿ ಲಗೇಜು ಇಲ್ಲದಿರುವುದನ್ನು ಊಟ-ತಿಂಡಿಗೆ ಹಣ ಇಲ್ಲದಿರುವುದನ್ನೆಲ್ಲಾ ಗಮನನಿಸಿದ ಪ್ರಯಾಣಿಕರಿಗೆ ಅನುಮಾನ ಮೂಡಿತ್ತು.
ಪ್ರಯಾಣಿಕರು ಆಕೆಯ ಬಗ್ಗೆ ವಿಚಾರಿಸಿದಾಗ ತಾನು ದೆಹಲಿಯಲ್ಲಿ ಅಜ್ಜಿಯ ಮನೆಯಲ್ಲಿದ್ದೆ. ನಂತರ ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರಿಗೆ ಬಂದಿದ್ದೆ. ಈಗ ದೆಹಲಿಗೆ ವಾಪಸ್ ಹೋಗುತ್ತಿದ್ದೇನೆ ಎಂದಿದ್ದಾಳೆ. ಆಕೆಯ ಉತ್ತರದಿಂದ ಅನುಮಾನ ಮೂಡಿದ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಆಕೆಯನ್ನು ಒಪ್ಪಿಸಿದ್ದಾರೆ.
ರೈಲ್ವೆ ಪೊಲೀಸರು ಬಾಲಕಿಯನ್ನು ವಿಚಾರಿಸಿದಾಗ, ‘ರಾಧಾ-ಕೃಷ್ಣ’ ಧಾರಾವಾಹಿಯಲ್ಲಿ ರಾಧೆಯು ಕೃಷ್ಣನನ್ನು ಹುಡುಕಿ ಬೇರೆಡೆ ಹೋಗುತ್ತಾಳೆ. ಅದರಂತೆ ನಾನೂ ಕೃಷ್ಣ ಪಾತ್ರಧಾರಿಯನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ’ ಎಂದು ಹೇಳಿದ್ದಾಳೆ.
ಬೆಂಗಳೂರಿನಲ್ಲಿ ಬಾಲಕಿಯ ಪೋಷಕರು ಮಗಳು ಕಾಣದಿದ್ದುದರ ಬಗ್ಗೆ ಭಯಗೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ರೈಲ್ವೆ ಪೊಲೀಸರು, ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದು, ಬಾಲಕಿಯ ಪೋಷಕರು ಮಗಳನ್ನು ಕರೆದೊಯ್ಯಲು ದೆಹಲಿಗೆ ಹೋಗುತ್ತಿದ್ದಾರೆ.