ಮಂಡ್ಯ, ಆ. 18: ಮೈಸೂರು, ಮಂಡ್ಯ ಸೇರಿದಂತೆ ಅನೇಕ ಜಿಲ್ಲೆಗಳ ಜೀವನಾಡಿ ಯಾಗಿದ್ದು, ತಮಿಳುನಾಡಿಗೂ ಹರಿಯುವ ಕಾವೇರಿ ನದಿಯ ಕೆಆರ್‌ಎಸ್ ಅಣೆಕಟ್ಟೆಗೆ ಇದೀಗ ಕಂಟಕ ಎದುರಾಗಿದೆ. ಈಗಾಗಲೇ ಕೆಆರ್‌ಎಸ್ ಅಣೆಕಟ್ಟೆ ಸುತ್ತಲೂ ಬೇಬಿ ಬೆಟ್ಟ ಸೇರಿದಂತೆ ಅನೇಕ ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇದೂ ಸಹ ಕೆಆರ್‌ಎಸ್ ಅಣೆಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅಲ್ಲದೆ, ಅಣೆಕಟ್ಟೆಯಲ್ಲಿ ಬಿರುಕಿಗೂ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಸಂಬಂಧ ಕಳೆದ ಎರಡು ತಿಂಗಳಿನಿಂದ ಸಂಸದೆ ಸುಮಲತಾ ಏಕಾಂಗಿ ಹೋರಾಟ ನಡೆಸುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ವಾಕ್ಸಮರಕ್ಕೂ ಇದೂ ಕಾರಣವಾಗಿತ್ತು. ಈ ನಡುವೆ ಇದೀಗ ಕೆಆರ್‌ಎಸ್ ಡ್ಯಾಂ ಬಳಿ ಕಾವೇರಿ ಪ್ರತಿಮೆಗೆ ಹೋಗುವ ರಸ್ತೆಯ ತಳಹದಿಯ ಕಲ್ಲುಗಳು ಕುಸಿದಿದ್ದು, ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಇಂದು ಮತ್ತೆ ಕೆಆರ್‌ಎಸ್ ಡ್ಯಾಂಗೆ ಭೇಟಿ ನೀಡಲು ಮುಂದಾಗಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ಕನ್ನಂಬಾಡಿಕಟ್ಟೆ ಬಿರುಕು ಬಿಟ್ಟಿದೆ ಅಂತ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ಬಳಿಕ ಸಾಕಷ್ಟು ಬೆಳವಣಿಗೆಗಳು ನಡೆದು ಪರ ವಿರೋಧ ಚೆರ್ಚೆಗಳು ನಡೆದಿದ್ವು. ಹಿಗಾಗಿ ಅಧಿಕಾರಿಗಳ ಸಮೇತ ಸುಮಲತಾ ಅಂಬರೀಶ್ ಕೂಡ ಕಳೆದ ತಿಂಗಳು ಡ್ಯಾಂ ವೀಕ್ಷಣೆ ಮಾಡಿದ್ದರು. ಈ ಸಂದರ್ಭ ಅಧಿಕಾರಿಗಳು ಡ್ಯಾಂ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಡ್ಯಾಂ ಸುರಕ್ಷಿತವಾಗಿದೆ ಅಂತ ತಮ್ಮ ವರದಿಯನ್ನ ನೀಡಿದ್ದರು. ಆದರೆ, ಇತ್ತೀಚೆಗೆ ಡ್ಯಾಂಗೆ ಹೊಂದಿಕೊಂಡಿರುವ ರಸ್ತೆಯ ತಳಹದಿ ಕುಸಿದಿದೆ. ಈ ತಳಹದಿಯು ಪ್ಲಸ್ 80 ಗೇಟ್ ಗಳ ಪಕ್ಕದಲ್ಲೆ ಇದ್ದು, ಇದು ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧದ ಸಮರಕ್ಕೆ ಮುಂದಾಗಿರುವ ಸುಮಲತಾ ಕೆಆರ್‌ಎಸ್ ಡ್ಯಾಂಗೆ ಮತ್ತೆ ಭೇಟಿಗೆ ಮುಂದಾಗಿದ್ದಾರೆ. ಡ್ಯಾಂ ಭೇಟಿ ವೇಳೆ ಡ್ಯಾಂ ಮೆಟ್ಟಿಲಿನ ಗೋಡೆ ಕುಸಿದಿದ್ದ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಗೋಡೆ ಕುಸಿಯಲು ಗಣಿಗಾರಿಕೆ ಕಾರಣವೇ ಎಂಬ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ ನಂತರ ಸಂಸದೆ ಸುಮಲತಾ ಈ ಬಗ್ಗೆ ಕ್ರಮ ಜರುಗಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
KRS ಭೇಟಿಗೂ ಮುನ್ನ ದಿಶಾ ಸಭೆ:
ಸಂಸದೆ ಸುಮಲತಾ ಕೆಆರ್‌ಎಸ್ ಡ್ಯಾಂಗೆ ಭೇಟಿ ನೀಡುವ ಮುನ್ನ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಿಶಾ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರವೇ ಹೆಚ್ಚು ಚರ್ಚೆಯಾಗಲಿದೆ. ಬೇಬಿ ಬೆಟ್ಟದಲ್ಲಿ ಪದೇ ಪದೇ ಸ್ಫೋಟಕ ಪತ್ತೆಯಾಗುತ್ತಿರುವುದು ಸೇರಿದಂತೆ ಹಲವು ವಿಚಾರ ಪ್ರಸ್ತಾಪ ಸಾಧ್ಯತೆ ಇದೆ.
ಗಣಿಗಾರಿಕೆ ವಿಚಾರವಾಗಿ ಸಭೆಯಲ್ಲಿ ಅಧಿಕಾರಿಗಳನ್ನು ಸುಮಲತಾ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮಧ್ಯಾಹ್ನ 1.30ಕ್ಕೆ ಗ್ರಾಮ ಸಡಕ್ ಯೋಜನೆಯ ವಿಚಾರ ಸಂಕಿರಣ ಉದ್ಘಾಟನೆ ನಡೆಸಲಿರುವ ಸುಮಲತಾ, ಮಧ್ಯಾಹ್ನ 3.30ಕ್ಕೆ KRS ಡ್ಯಾಂ ಭೇಟಿ ಮಾಡಿ ಮೆಟ್ಟಿಲಿನ ಗೋಡೆ ಕುಸಿದಿದ್ದ ಸ್ಥಳ ಪರಿಶೀಲಿಸಲಿದ್ದಾರೆ.