Bengaluru: ಕರ್ನಾಟಕ ಸರ್ಕಾರ ಕೆಎಸ್ಆರ್ಟಿಸಿ,(KSRTC) ಬಿಎಂಟಿಸಿ (BMTC) ಸೇರಿದಂತೆ ನಾಲ್ಕು ನಿಗಮಗಳ ನೌಕರರಿಗೆ 38 ತಿಂಗಳ ಅರಿಯರ್ಸ್ ಬಾಕಿ ಹಣ ಈವರೆಗೂ ಬಿಡುಗಡೆ ಮಾಡಿಲ್ಲ. 2024 ಜನವರಿಯಿಂದ ನೌಕರರಿಗೆ ಸಂಬಳ ಹೆಚ್ಚಳ ಮಾಡಬೇಕಿತ್ತು, ಆದರೆ ನವೆಂಬರ್ ತಿಂಗಳು ಬಂದರೂ ಇನ್ನೂ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ನಿವೃತ್ತಿ ಹೊಂದಿದ (Retirement) ನೌಕರರಿಗೆ ಗ್ರಾಚ್ಯುಟಿ (Gratuity) ಹಣವನ್ನು ಕೂಡ ಬಿಡುಗಡೆ ಮಾಡಿಲ್ಲ. ಅರಿಯರ್ಸ್ (Arrears) ಹಣವೇ ಒಟ್ಟು 1750 ಕೋಟಿ ರುಪಾಯಿ ನೀಡಬೇಕಿದೆ. ಗ್ರಾಚ್ಯುಟಿ (Gratuity) ಹಣ ಸುಮಾರು 399.29 ಕೋಟಿ ರುಪಾಯಿ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು (Transport employees) ಮತ್ತೊಮ್ಮೆ ಸಾರಿಗೆ ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದಾರೆ.
ಇನ್ನು ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ(Government) ಒತ್ತಡ ಹಾಕುವ ಸಂಬಂದ ಶುಕ್ರವಾರ ಆರು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಗಾಂಧಿನಗರದ ಸಿಐಟಿಯು ಮುಖ್ಯ ಕಚೇರಿಯಲ್ಲಿ ಸಭೆ ನಡೆಸಿದೆ. ಈ ವೇಳೆ ಮಾತನಾಡಿದ ಸಾರಿಗೆ ಮುಖಂಡ ಅನಂತ್ ಸುಬ್ಬರಾವ್, ಮುಖ್ಯಮಂತ್ರಿಯಲ್ಲಿ (Chief Minister) ಕೇಳಿ ಕೊಳ್ಳುವುದಿಷ್ಟೆ; ಈ ಹಿಂದೆ ನೀವು ಸಿಎಂ ಆಗಿದ್ದಾಗ, ನಾವು ಮೂರು ದಿನ ಮುಷ್ಕರ ಮಾಡಿದ್ದೆವು. ನಂತರ ಮೂರನೇ ದಿನ ನಮ್ಮ ಬೇಡಿಕೆ ಈಡೇರಿಸಲು ಮುಂದಾಗಿದ್ದಿರಿ. ಈ ಬಾರಿ ಆ ಪರಿಸ್ಥಿತಿ ತರಬೇಡಿ. ಈಗಾಗಲೇ ಸಾರಿಗೆ ನೌಕರರು ಮುಷ್ಕರ ಮಾಡುವ ಮನಸ್ಥಿತಿಯಲ್ಲಿದ್ದಾರೆ ಎಂದಿದ್ದಾರೆ.
ಈಗಾಗಲೇ ಹಲವು ಸಲ ಮನವಿ ನೀಡಿದ್ದೇವೆ. ಸರ್ಕಾರ (Govt) ಸರಿಯಾಗಿ ಸ್ಪಂದಿಸದ ಕಾರಣ ನೌಕರರು ನೊಂದಿದ್ದಾರೆ.ಹಾಗಾಗಿ ಮುಷ್ಕರ ಕೈಗೊಳ್ಳುವ ಕುರಿತು ಯೋಚಿಸುತ್ತಿದ್ದಾರೆ.ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ನಾವು ನೌಕರರಿಗೆ ಹೇಳಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಮ್ಮ ಮುಷ್ಕರ (Strike) ವಾಪಸ್ಸು ಪಡೆಯಲ್ಲ. ಇದು ಬಹಳ ಸ್ಪಷ್ಟ, ನೌಕರರು ಮುಷ್ಕರಕ್ಕೆ ಸಿದ್ಧರಾಗಿದ್ದಾರೆ. ನಾವು ಈಗ ಮುಷ್ಕರದ ದಿನಾಂಕ ಘೋಷಣೆ ಮಾಡುವುದಷ್ಟೇ ಬಾಕಿ. ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ನೌಕರರು (Employees) ಈಗಾಗಲೇ ಮುಷ್ಕರಕ್ಕೆ ಸಿದ್ದರಾಗಿದ್ದಾರೆ. ನಾವು ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.