ನಾನು ಮಣ್ಣಿಗೆ ಹೋಗುವುದರೊಳಗಾಗಿ ಜೆಡಿಎಸ್ ಪಕ್ಷದಿಂದ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇನೆ. ದಲಿತ ಸಮುದಾಯಕ್ಕೆ ಸಿಗಬೇಕಾದ ಪ್ರಾಧಾನ್ಯತೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜೆಡಿಎಸ್(JDS) ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ(HD Kumarswamy) ಹೇಳಿದ್ದಾರೆ. ಮಂಡ್ಯ(Mandya) ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಡಾ. ಬಿ.ಆರ್ ಅಂಬೇಡ್ಕರ್(BR Ambedkar) ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಡಿಎಸ್ ಪಕ್ಷ ಅನೇಕ ದಲಿತ ನಾಯಕರನ್ನು ಬೆಳೆಸಿದೆ.
ನಮ್ಮ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ದಲಿತ ನಾಯಕರಿಗೆ ನೀಡಿದ್ದೇವೆ. ನಾವು ಸರ್ಕಾರ ರಚಿಸಿದಾಗಲೂ ದಲಿತರಿಗೆ ಉನ್ನತ ಸ್ಥಾನಮಾನಗಳನ್ನು ನೀಡಿದ್ದೇವೆ. ಇನ್ನು ಮೀಸಲಾತಿ ಇಲ್ಲದ ಕಾಲದಲ್ಲೇ, ಹಾಸನ(Hassan) ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‍ನಿಂದ ಆಯ್ಕೆಯಾಗಿದ್ದ ಎಂ.ಎ ಪದವೀಧರ ಅಭ್ಯರ್ಥಿಗೆ ದೇವೇಗೌಡರು ನೀಡಿದ್ದರು. ಅದೇ ವೇಳೆಯಲ್ಲಿ ಎಚ್.ಡಿ ರೇವಣ್ಣ ಕೂಡಾ ಜಿಲ್ಲಾ ಪಂಚಾಯತಿಗೆ ಆಯ್ಕೆಯಾಗಿದ್ದರು. ಅವರನ್ನು ಅಧ್ಯಕ್ಷ ಹುದ್ದೆಗೆ ಪರಿಗಣಿಸಿರಲಿಲ್ಲ. ದಲಿತ ನಾಯಕರಿಗೆ ಉತ್ತಮ ಸ್ಥಾನಮಾನ ನೀಡುವುದು ದೇವೇಗೌಡರ ಮುಖ್ಯ ಉದ್ದೇಶವಾಗಿತ್ತು ಎಂದರು.
ನನ್ನ ಬಳಿಗೆ ರಾಜ್ಯದ ವಿವಿಧ ಮೂಲೆಗಳಿಂದ ಜನರು ತಮ್ಮ ಕಷ್ಟಗಳನ್ನು ಹೊತ್ತು ಬರುತ್ತಾರೆ. ನಾನೆಂದು ಅವರಿಗೆ ನಿಮ್ಮ ಜಾತಿ ಯಾವುದು? ಧರ್ಮ ಯಾವುದು? ಎಂದು ಕೇಳುವುದಿಲ್ಲ ಅವರ ಸಮಸ್ಯೆ ಮಾತ್ರ ಕೇಳುತ್ತೇನೆ. ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಇಲ್ಲದಿದ್ದರೂ, ನನ್ನ ಮನೆಗೆ ಬರುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ನನಗೆ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕರೆ ಜನಪರ ಕೆಲಸಗಳನ್ನು ಮಾಡುತ್ತೇನೆ.
ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ಸರಿಪಡಿಸುತ್ತೇನೆ. ನನಗೊಂದು ಸ್ವಂತ ಬಲದ ಸರ್ಕಾರ ರಚಿಸುವ ಶಕ್ತಿ ನೀಡಬೇಕೆಂದು ಮನವಿ ಮಾಡಿದರು.