ಹರಿದ್ವಾರ , ಏ. 14: ಕುಂಭ ಮೇಳ ನಡೆಯುತ್ತಿರುವ ಉತ್ತರಾಖಾಂಡದ ಹರಿದ್ವಾರದಲ್ಲಿ ಲಕ್ಷಾಂತರ ಜನ ಭಕ್ತರು ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕೊರೋನಾ ಪರೀಕ್ಷೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಏಪ್ರಿಲ್ 10 ರಿಂದ ಏಪ್ರಿಲ್ 13 ರ ಸಂಜೆವರೆಗಿನ ಸುಮಾರು ನಾಲ್ಕು ದಿನಗಳ ಅವಧಿಯಲ್ಲಿ ಮೇಳದ ಸ್ಥಳದಿಂದ 1,086 ಕೊರೋನಾ ಪ್ರಕರಣಗಳು ವರದಿಯಾಗಿವೆ.
ಕರೊನಾ ಹಿನ್ನೆಲೆಯಲ್ಲಿ ಅನ್ಯಸ್ಥಳಗಳಿಂದ ಹರಿದ್ವಾರಕ್ಕೆ ಬರುವ ಜನರಿಗೆ ಕರೊನಾ ಪರೀಕ್ಷೆಯಲ್ಲಿ ನೆಗೆಟೀವ್ ಬಂದರಷ್ಟೇ ಪ್ರವೇಶ ನೀಡಲಾಗುತ್ತಿದೆ. ಲಕ್ಷಾಂತರ ಜನರು ಸೇರುತ್ತಿರುವ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಮುಂತಾದ ಕರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಆಡಳಿತ ಎಚ್ಚರಿಕೆಗಳನ್ನು ನೀಡಿದೆ. ಆದಾಗ್ಯೂ ಪ್ರಾಯೋಗಿಕವಾಗಿ ಇದು ಬಹುಮಟ್ಟಿಗೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 10 ರಂದು 125 ಕರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಏಪ್ರಿಲ್ 11 ಮತ್ತು ಏಪ್ರಿಲ್ 13 ರ ನಡುವೆ ಪ್ರಕರಣಗಳು ಹೆಚ್ಚಿದ್ದು, 961 ಕೇಸುಗಳು ದಾಖಲಾಗಿವೆ ಎಂದು ಹರಿದ್ವಾರದ ಮುಖ್ಯ ಆರೋಗ್ಯಾಧಿಕಾರಿ ಡಾ. ಎಸ್.ಕೆ.ಝಾ ನೀಡಿರುವ ಅಂಕಿಅಂಶಗಳು ತಿಳಿಸಿವೆ. ಏಪ್ರಿಲ್ 12 ರ ಸೋಮವಾರದಂದು ಎರಡನೇ ಶಾಹಿ ಸ್ನಾನದಲ್ಲಿ ಸುಮಾರು 30 ಲಕ್ಷ ಭಕ್ತರು ಭಾಗವಹಿಸಿದ್ದರು. ಈ ಸಮಯದಲ್ಲಿ ಮೇಳದ ಸ್ಥಳದಲ್ಲಿ 66,203 ಜನರಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, ಹರಿದ್ವಾರ, ಪೌಡಿ, ಟೆಹ್ರಿ ಮತ್ತು ಡೆಹ್ರಾಡೂನ್ನ ಕೆಲವು ಭಾಗಗಳಿಂದ 387 ಪಾಸಿಟೀವ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.
ಇಂದು ಮತ್ತೊಂದು ಶಾಹಿ ಸ್ನಾನ ನಡೆಯುತ್ತಿದ್ದು, ಕುಂಭ ಮೇಳವು ಏಪ್ರಿಲ್ 30 ರವರೆಗೆ ಏರ್ಪಟ್ಟಿದೆ. ರಾಜ್ಯದಲ್ಲಿ ನಿನ್ನೆ ಒಟ್ಟು 1,965 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, 13 ಸಾವುಗಳು ಸಂಭವಿಸಿವೆ ಎನ್ನಲಾಗಿದೆ.