ಮುಂಬೈ, ಮೇ. 12: ಕೇಂದ್ರ ಸರ್ಕಾರ ಮೇ ೧ರಿಂದ 18 ರಿಂದ 44 ವಯೋಮಾನದವರಿಗೆ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಘೋಷಿಸಿತ್ತು. ಆದರೆ ಇದುವರೆಗೆ ಯಾವ ರಾಜ್ಯಗಳಿಗೂ ಅಗತ್ಯವಿರುವಷ್ಟು ಲಸಿಕೆ ಲಭಿಸಿಲ್ಲ. ಈ ಹಿನ್ನಲೆ ಹಲವಾರು ರಾಜ್ಯಗಳಲ್ಲಿ ಲಸಿಕೆ ಅಭಾವ ಕಾಣಿಸಿದೆ. ಹೀಗಾಗಿ ಮಾಹಾರಾಷ್ಟ್ರದಲ್ಲೂ ಸಹ ಲಸಿಕೆಗಳ ಕೊರತೆ ತಲೆದೋರಿದೆ. ಆದ್ದರಿಂದ 18 ರಿಂದ 44 ವಯೋಮಾನದವರ ಲಸಿಕೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಮಹಾರಾಷ್ಟ್ರ ಸರ್ಕಾರ 45 ವರ್ಷಕ್ಕೆ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ತಿಳಿಸಿದೆ.
ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ, “ಮಹಾರಾಷ್ಟ್ರದಲ್ಲಿ ಲಸಿಕೆಗಳ ಡೋಸೇಜ್ ಕಡಿಮೆ ಇದೆ. ಹೀಗಾಗಿ 18-44 ವಯಸ್ಸಿನವರಿಗೆ ಲಸಿಕೆ ನೀಡಲು ಸಾಧ್ಯವಾಗದೆ, ಈ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದ್ದೇವೆ. ಆದಾಗ್ಯೂ ನಾವು ಲಸಿಕೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸುತ್ತಿಲ್ಲ, ಬದಲಾಗಿ 45 ವರ್ಷಕ್ಕೆ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡುತ್ತಿದ್ದೇವೆ. ಅಲ್ಲದೆ, ಹೆಚ್ಚಿನ ಲಸಿಕೆಗಳನ್ನು ಪಡೆಯುವ ಬಗ್ಗೆಯೂ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸುತ್ತೇನೆ” ಎಂದು ತಿಳಿಸಿದ್ದಾರೆ.
ಲಸಿಕೆಗಳ ಆಮದಿನ ಕುರಿತಾಗಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಎಂ ಉದ್ಧವ್ ಠಾಕ್ರೆ, “ಮುಂಬೈಗೆ ಜಾಗತಿಕವಾಗಿ ಲಸಿಕೆಗಳನ್ನು ಸಂಗ್ರಹಿಸುವ ಸಾಧ್ಯತೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ನಾವು ಅದನ್ನು ಮಾಡಲು ಸಾಧ್ಯವಾದರೆ, ಮೂರು ವಾರಗಳಲ್ಲಿ ಮುಂಬೈ ಜನರಿಗೆ ಲಸಿಕೆ ಹಾಕಲು ನಮ್ಮಲ್ಲಿ ಮಾರ್ಗಸೂಚಿ ಸಿದ್ದವಾಗಲಿದೆ” ಎಂದು ತಿಳಿಸಿದ್ದರು.