ಪ್ರತಿದಿನ ರಾಮ(Ram) ಭಜನೆ ಮಾಡುತ್ತಾ, ರಾಮನನ್ನು ನೆನೆಯುವ ರಾಮಭಕ್ತರ ಹೃದಯ ಇಷ್ಟೊಂದು ಕಠೋರವಾಯ್ತಾ ಎಂದು ಕಾಂಗ್ರೆಸ್(Congress) ಶಾಸಕಿ(MLA) ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. ಬೆಳಗಾವಿ(Belagavi) ತಾಲೂಕಿನ ಬಡಸ ಗ್ರಾಮದಲ್ಲಿ ನಡೆದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಸಂತೋಷ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ(BS Yedurappa) ಅಪ್ಪಟ ಅಭಿಮಾನಿ.
ತಮ್ಮದೇ ಪಕ್ಷದ ಕಾರ್ಯಕರ್ತ ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನವೀಯತೆ ದೃಷ್ಟಿಯಿಂದ ಅಥವಾ ಸೌಜನ್ಯಕ್ಕಾದರೂ ಸಂತೋಷ ಕುಟುಂಬಕ್ಕೆ ಸಾಂತ್ವನ ಹೇಳಲು ಯಾವುದೇ ಬಿಜೆಪಿ ನಾಯಕ ಇಲ್ಲಿಗೆ ಆಗಮಿಸಿಲ್ಲ. ಬಿಜೆಪಿಗರು ಇಷ್ಟೊಂದು ಕಠೋರ ಆಗಿ ಬಿಟ್ರಾ? ಎಂದು ಪ್ರಶ್ನಿಸಿದರು.
ಸಂತೋಷ ಪಾಟೀಲ್ ಕುಟುಂಬದವರು ಕಳೆದೆರೆಡು ದಿನಗಳಿಂದ ಊಟ ನಿದ್ರೆಯಿಲ್ಲದೇ ಸಂಕಷ್ಟದಲ್ಲಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ ಮರಳಿ ಬರುವುದಿಲ್ಲ.
ಆದರೆ ಅವರ ಕುಟುಂಬದ ಅನುಕೂಲಕ್ಕಾಗಿ ಸಂತೋಷ ಮಾಡಿದ್ದ 4 ಕೋಟಿ ರೂ. ಕಾಮಗಾರಿಯ ಬಿಲ್ ರಿಲೀಜ್ ಮಾಡಬೇಕು ಮತ್ತು 1 ಕೋಟಿ ರೂ.ಗಳನ್ನು ಅವರ ಕುಟುಂಬಕ್ಕೆ ಸರ್ಕಾರ ನೀಡಬೇಕು. ಸಂತೋಷ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಇನ್ನು ಸಂತೋಷ ಮೃತ ದೇಹದ ಜೊತೆಗಿದ್ದ ಅವರ ಮೊಬೈಲ್ನಲ್ಲಿ ಅನೇಕ ಸಾಕ್ಷ್ಯಗಳು ಲಭ್ಯವಾಗಿವೆ. ಆ ಮೊಬೈಲ್ನಲ್ಲಿ ಎಲ್ಲಾ ಸಾಕ್ಷ್ಯಗಳಿವೆ.
ಅದರ ಆಧಾರದ ಮೇಲೆ ಮೂವರ ಮೇಲೆ ಎಫ್ಐಆರ್ ಆಗಿದೆ. ಆದರೆ ಇದುವರೆಗೂ ಅವರನ್ನು ಬಂದಿಸಿಲ್ಲ. ಕೂಡಲೇ ಸರ್ಕಾರ ಕೆ.ಎಸ್ ಈಶ್ವರಪ್ಪ ಅವರನ್ನು ಬಂಧಿಸಬೇಕು. ಅವರನ್ನು ಸಚಿವ ಸ್ಥಾನದಿಂದ ವಜಾಮಾಡಿ ತನಿಖೆ ನಡೆಸಿ, ಶಿಕ್ಷೆ ವಿಧಿಸಬೇಕು. ಈ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.