ರಾಂಚಿ: ಸತತ 32 ವರ್ಷಗಳ ಕಾಲ ತಮ್ಮ ಒಡನಾಡಿಯಾಗಿದ್ದ ರಘುವಂಶ್ ಪ್ರಸಾದ್ ಸಿಂಗ್ ಅವರು ಪಕ್ಷ ತೊರೆದಿರುವ ನಿರ್ಧಾರಕ್ಕೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಹತ್ತಿರದಲ್ಲೇ ಇರುವಾಗ ಪಕ್ಷ ತೊರೆದಿರುವುದು ಸರಿಯಲ್ಲ. ನೀವು ಎಲ್ಲೂ ಹೋಗುವುದಿಲ್ಲ ಎಂದು ಲಾಲು ಅವರು ಹೇಳಿದ್ದಾರೆ.
ಈ ಕುರಿತು ರಘುವಂಶ್ ಅವರಿಗೆ ಪತ್ರ ಬರೆದಿರುವ ಲಾಲು ಅವರು ನೀವು ಮೊದಲು ಚೇತರಿಸಿಕೊಂಡು ಬನ್ನಿ, ಪಕ್ಷ ತೊರೆಯುವ ನಿಮ್ಮ ನಿರ್ಧಾರದ ಬಗ್ಗೆ ನಾನು ಪಕ್ಷದ ಇತರರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಾವು ದಶಕಗಳಿಂದ ರಾಜಕೀಯದಲ್ಲಿದ್ದೇವೆ. ಸುಖ ದುಃಖಗಳನ್ನು ಹಂಚಿಕೊಂಡಿದ್ದೇವೆ. ಎಂತಹ ಕಠಿಣ ಸಂದರ್ಭದಲ್ಲೂ ನೀವು ನನ್ನೊಟ್ಟಿಗಿದ್ದು ಸಹಕರಿಸಿದ್ದೀರಿ. ನಿಮ್ಮ ಕುಟುಂಬವನ್ನೂ ನಾನು ಹತ್ತಿರದಿಂದ ಬಲ್ಲೆ, ನೀವು ಪಕ್ಷ ತೊರೆಯುತ್ತೀನಿ ಎಂದು ಹೇಳಿರುವ ಮಾತನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಹುಷಾರಾಗಿ ಬನ್ನಿ ಕುಳಿತು ಮಾತನಾಡೋಣ ಎಂದು ಲಾಲು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ