ಮಳೆ ಆರ್ಭಟಕ್ಕೆ ವಯನಾಡ್ ತತ್ತರ; ಸುರಂಗ (Landslide at Wayanad) ಯೋಜನಾ ಸ್ಥಳದಲ್ಲಿ ಭೂಕುಸಿತ
30ರಿಂದ 50 ಕಾರ್ಮಿಕರು ಸಿಲುಕಿರುವ ಶಂಕೆ; ಸ್ಥಳೀಯರು ಮತ್ತು ರಕ್ಷಣಾ ತಂಡಗಳಿಂದ ನಿರಂತರ ಶೋಧ
ಭಾರಿ ಮಳೆಯಿಂದ ಕಾಮಗಾರಿ ಪ್ರದೇಶದಲ್ಲಿ ಅವಘಡ; ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದಿಂದ ತೀವ್ರ ಶೋಧ ಕಾರ್ಯಾಚರಣೆ
Wayanad : ಕೇರಳದ ವಯನಾಡ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ (Landslide at Wayanad) ಸುರಂಗ ರಸ್ತೆ ಯೋಜನಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಭಾರಿ ಮಳೆಯ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಅಧಿಕಾರಿಗಳು ನಿಕಟವಾಗಿ ಗಮನಿಸುತ್ತಿದ್ದಾರೆ.
ಕಲ್ಲಾಡಿಯ ಮೀನಾಕ್ಷಿ ಸೇತುವೆ ಸಮೀಪ ಈ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು (Landslide at Wayanad) ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ವಯನಾಡ್ ಮತ್ತು ಮಲಪ್ಪುರಂ (Malappuram) ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ರಸ್ತೆ ಕಾಮಗಾರಿ ನಡೆಯುತ್ತಿತ್ತು.
ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಬೆಟ್ಟದ ಭಾಗ ಕುಸಿದ ಪರಿಣಾಮ ಕಾಮಗಾರಿ ಸ್ಥಳ ಸಂಪೂರ್ಣ ಮಣ್ಣಿನಡಿ ಮುಚ್ಚಿಕೊಂಡಿದೆ.
ಪ್ರಾಥಮಿಕ ಮಾಹಿತಿಯಂತೆ ಸುಮಾರು 30 ರಿಂದ 50 ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಭೂಕುಸಿತ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ಆರಂಭಿಕ ಹಂತದಲ್ಲೇ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಆದರೆ ಇನ್ನೂ ಹಲವರು ಸುರಂಗದ ಒಳಭಾಗ ಹಾಗೂ ಮಣ್ಣಿನ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇರುವುದರಿಂದ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಭೂಕುಸಿತದ ವೇಳೆ
ಕಾರ್ಮಿಕರನ್ನು ಸಾಗಿಸಲು ಬಳಸುತ್ತಿದ್ದ ಬಸ್, ಕಾರುಗಳು, ಕಂಟೇನರ್‌ಗಳು ಹಾಗೂ ಮಣ್ಣು ತೆಗೆಯುವ ಯಂತ್ರಗಳು ಕೂಡ ಮಣ್ಣಿನಡಿ ಹೂತುಹೋಗಿರುವುದಾಗಿ ತಿಳಿದುಬಂದಿದೆ.
ಘಟನೆಯಿಂದಾಗಿ ಪ್ರದೇಶದಲ್ಲಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೀನಾಕ್ಷಿ ಸೇತುವೆ ಬಳಿಯಿರುವ ಸಣ್ಣ ನದಿ ಉಕ್ಕಿ ಹರಿಯುತ್ತಿರುವ ಕಾರಣ ರಕ್ಷಣಾ ಕಾರ್ಯಕ್ಕೆ ಹೆಚ್ಚುವರಿ ಸವಾಲು ಎದುರಾಗಿದೆ.
ಸುರಕ್ಷತಾ ದೃಷ್ಟಿಯಿಂದ ಸುತ್ತಮುತ್ತಲಿನ ಮನೆಗಳು ಹಾಗೂ ಹೋಂಸ್ಟೇಗಳಲ್ಲಿ (Homestay) ವಾಸಿಸುತ್ತಿದ್ದ ಜನರನ್ನು ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ.
ಆರೋಗ್ಯ ಇಲಾಖೆ, ಪೊಲೀಸರು ಹಾಗೂ ಇತರ ತುರ್ತು ಸೇವೆಗಳ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳನ್ನು ಸಜ್ಜುಗೊಳಿಸುವಂತೆ ಸೂಚನೆ ನೀಡಲಾಗಿದೆ.
ಘಟನೆಯ ಕುರಿತು ರಾಜ್ಯ ಸರ್ಕಾರ ತುರ್ತು ಸಭೆ ನಡೆಸಿದ್ದು, ಸಂಬಂಧಿತ ಸಚಿವರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದೆ.
ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಲು ಮತ್ತು ಸಿಲುಕಿರುವವರನ್ನು ಶೀಘ್ರದಲ್ಲಿ ಪತ್ತೆಹಚ್ಚಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಸ್ಥಳೀಯರ ಪ್ರಕಾರ ಯಾವುದೇ ಮುನ್ಸೂಚನೆ ಇಲ್ಲದೆ ಭಾರಿ ಸದ್ದಿನೊಂದಿಗೆ ಭೂಕುಸಿತ ಸಂಭವಿಸಿದ್ದು, ದೊಡ್ಡ ಪ್ರಮಾಣದ ಮರಗಳು ನೆಲಕ್ಕುರುಳಿರುವುದರಿಂದ ರಕ್ಷಣಾ ಕಾರ್ಯ ಮತ್ತಷ್ಟು ಸಂಕೀರ್ಣವಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನು ಓದಿ : https://vijayatimes.com/end-of-cristiano-ronaldo-journey/
