ಬೆಂಗಳೂರು, ಜು. 22: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸಿಎಂ ಬದಲಾವಣೆ ವಿಚಾರದ ಕುರಿತು ದೊಡ್ಡ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಕುರಿತು ಲೇವಡಿ ಮಾಡಿರುವ ಕಾಂಗ್ರೆಸ್, ನಳಿನ್ ಆಡಿಯೋ ಹಾಗೂ ಷಡ್ಯಂತ್ರ ಎರಡೂ ಸತ್ಯವಾಯಿತು. ನಳಿನ್ ಪರ ಮಾತನಾಡಿದ ಬಿಜೆಪಿ ನಾಯಕರು ನೇಣು ಹಾಕಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದೆ.
ಈ ಬಗ್ಗೆ ಪಕ್ಷದ ಟ್ವಿಟರ್ ಖಾತೆ ಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೊದಲೆಲ್ಲ ನಾಯಕತ್ವ ಬದಲಾವಣೆಯ ಪ್ರಶ್ನೆ ಬಂದಾಗ ಯಡಿಯೂರಪ್ಪ ಅವರು, ಇನ್ನೆರೆಡು ವರ್ಷ ನಾನೇ ಸಿಎಂ ಎಂದು ವಿಶ್ವಾಸದಲ್ಲಿ ಹೇಳುತ್ತಿದ್ದರು. ಆದರೆ ಈಗ ‘ಹೈಕಮಾಂಡ್ ಆದೇಶಕ್ಕಾಗಿ ಕಾಯುತ್ತಿರುವೆ’ ಎಂದು ಹತಾಶರಾಗಿದ್ದಾರೆಂದರೆ, ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ಅವರ ಆಡಿಯೋ ಹಾಗೂ ಷಡ್ಯಂತ್ರ ಎರೆಡೂ ಸತ್ಯವೆಂದಾಯ್ತು ಎಂದು ಹೇಳಿದೆ.
ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ರ ಆಡಿಯೋ ಸುಳ್ಳು ಎನ್ನುವ ಬಿಜೆಪಿ, ಮಾಧ್ಯಮಗಳಲ್ಲಿ, ತಮ್ಮದೇ ಪಕ್ಷದ ಶಾಸಕ, ಸಚಿವರಲ್ಲಿ ಇಷ್ಟೆಲ್ಲ ಗೊಂದಲಗಳಿದ್ದರೂ ಸ್ಪಷ್ಟನೆ ನೀಡುತ್ತಿಲ್ಲವೇಕೆ? ತಾಕತ್ತಿದ್ದರೆ ಬಿಜೆಪಿ ಪಕ್ಷದ ಐಟಿ ಸೆಲ್ ನಾಯಕತ್ವ ಬದಲಾವಣೆ ಇಲ್ಲ, ಇನ್ನೆರೆಡು ವರ್ಷ ಯಡಿಯೂರಪ್ಪ ಅವರೇ ಸಿಎಂ” ಎಂದು ಒಂದೇ ಒಂದು ಟ್ವೀಟ್ ಮಾಡಿಬಿಡಲಿ ಎಂದು ಸವಾಲು ಹಾಕಿದೆ.
ನಳಿನ್ ಕುಮಾರ್ ಕಟೀಲ್ ಅವರ ಮಾನ ಉಳಿಸಲು ಕಾಂಗ್ರೆಸ್ ಮೇಲೆ ಆಡಿಯೋ ಬಗ್ಗೆ ಸುಳ್ಳು ಆರೋಪ ಹೊರಿಸಿದ ಕೆಲವು ಬಿಜೆಪಿ ಕರ್ನಾಟಕದ ನಾಯಕರು ಈಗ ನೇಣು ಹಾಕಿಕೊಳ್ಳುತ್ತಾರಾ!? ತಮ್ಮ ಸುಳ್ಳು ಆರೋಪಕ್ಕಾಗಿ ಯಾವ ರೀತಿಯಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ ಹೇಳಿಬಿಡಲಿ ಎಂದು ವ್ಯಂಗ್ಯವಾಡಿದೆ.