ಬೆಂಗಳೂರು, ಫೆ. 21: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುವ ಮುಖ್ಯಮಂತ್ರಿಗಳು, ದುಡ್ಡಿಲ್ಲದಿದ್ದರೆ ಕುರ್ಚಿ ಬಿಟ್ಟು ಇಳಿಯಿರಿ; ನಾವು ಅಧಿಕಾರ ನಡೆಸಿ ತೋರಿಸುತ್ತೇವೆ ಎಂದು ಬಿಎಸ್ವೈಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾವ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರದ ಬಳಿ ಹಣ ಇಲ್ಲ ಎನ್ನುತ್ತಾರೆ. ಸರ್ಕಾರ ನಡೆಸೋಕೆ ಆಗಲ್ಲ ಅಂದಮೇಲೆ ಮುಖ್ಯಮಂತ್ರಿಯಾಗಿ ಯಾಕಿದೀರ? ದುಡ್ಡಿಲ್ಲದಿದ್ದರೆ ಖುರ್ಚಿ ಬಿಟ್ಟು ಇಳಿಯಿರಿ. ನಾವು ಯಾರಾದರೂ ಅಧಿಕಾರ ನಡೆಸಿ ತೋರಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನರು ಕಷ್ಟದಲ್ಲಿ ದಿನ ದೂಡುವಂತಾಗಿದೆ. ದೇಶದ ಈ ದುಸ್ಥಿತಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ತಮ್ಮ ಗುರುತು ಸಿಗಬಾರದು ಅಂತ ಗಡ್ಡ ಬೆಳೆಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಅಲ್ಲದೇ, ಸುಳ್ಳಿಗೆ ಪರ್ಯಾದ ಪದವೆಂದರೆ ಅದು ನರೇಂದ್ರ ಮೋದಿ,ಅವರ ಚುನಾವಣಾ ಪೂರ್ವದ ಭಾಷಣಕ್ಕೂ, ಇಂದಿನ ಆಡಳಿತಕ್ಕೂ ಒಂದಕ್ಕೊಂದು ತದ್ವಿರುದ್ಧವಾಗಿದೆ. ಮೋದಿ, ಮೋದಿ ಅಂತ ಘೋಷಣೆ ಕೂಗುತ್ತಾ, ಅಧಿಕಾರ ಕೊಟ್ಟ ಜನರೇ ಇಂದು ಮೋಸ ಹೋಗಿದ್ದಾರೆ. ಮೋದಿಯವರ ನಿಜ ಬಣ್ಣವನ್ನು ಕಾಂಗ್ರೆಸ್ ಪಕ್ಷ ಬಯಲಿಗೆಳೆಯಲಿದೆ ಎಂದರು.