ಸಂಬಂಧದಲ್ಲಿ ನಂಬಿಕೆ ತುಂಬಾ ಮುಖ್ಯ. ಈ ಜಗತ್ತಲ್ಲಿ ಸಂಬಂಧಗಳು ನಿಂತಿರುವುದೇ ನಂಬಿಕೆ ಮೇಲೆ. ಈ ಕಾಣದ ಶಕ್ತಿ ಎರಡು ಮನಸ್ಸುಗಳನ್ನು ಒಟ್ಟಿಗೆ ಬಾಳುವಂತೆ ಮಾಡುತ್ತೆ. ಶಾಶ್ವತವಾದ ಸಂಬಂಧಕ್ಕೆ ನಾಂದಿಯಾಗುತ್ತೆ. ಆದರೆ ಸಂಬಂಧಕ್ಕೆ ಕಾಲಿಡುವಾಗ ವಿಶ್ವಾಸವನ್ನು ಗಳಿಸುವುದು ಕಷ್ಟದ ಕೆಲಸ. ಸಮಯ ಕಳೆದಂತೆ ಇಬ್ಬರೂ ಒಟ್ಟಿಗೇ ಸೇರಿದಾಗ ಇದು ಸಾಧ್ಯವಾಗುವುದು. ಆದ್ದರಿಂದ ಈ ಲೇಖನದಲ್ಲಿ ನಾವು ನಿಮ್ಮ ಸಂಬಂಧದಲ್ಲಿ ನಂಬಿಕೆ-ವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಸಲಹೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಸಂಬಂಧದಲ್ಲಿ ನಂಬಿಕೆ ಬೆಳೆಸುವುದು ಹೇಗೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:
ಸಂಬಂಧಕ್ಕೊಂದು ಚೌಕಟ್ಟಿರಲಿ:
ನೀವಿಬ್ಬರು ಒಟ್ಟಿಗೆ ಇರುವ ಕಾರಣಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಆ ಕಾರಣಗಳು ಸರಿಯಾಗಿವೆಯೆ ಎಂದು ಖಚಿತಪಡಿಸಿಕೊಳ್ಳಿ. ಮೊದಲು ನಿಮ್ಮ ಸಂಬಂಧದ ಸುತ್ತ ಒಂದು ಚೌಕಟ್ಟನ್ನು ನಿರ್ಮಿಸಿ. ಆ ಚೌಕಟ್ಟು ಬಿಟ್ಟು ಇಬ್ಬರೂ ಸಾಗಬೇಡಿ. ಅಂದರೆ ಅವರಿಗಿಷ್ಟವಿಲ್ಲದ ವಿಚಾರಗಳನ್ನ ನೀವೂ ಮಾಡಬೇಡಿ. ನಿಮಗಿಷ್ಟವಿಲ್ಲದ ವಿಚಾರಗಳನ್ನು ಅವರೂ ಮಾಡಬಾರದು.
ಗೌರವ ತುಂಬಾ ಮುಖ್ಯ:
ನೀವು ಯಾರನ್ನಾದರೂ ಪ್ರೀತಿಸಿದರೆ, ಅವರನ್ನು ಗೌರವಿಸಬೇಕು. ನಿಮ್ಮಿಬ್ಬರ ನಡುವೆ ಎಷ್ಟು ಗೌರವವನ್ನು ಸೃಷ್ಟಿಸುತ್ತೀರೋ ಅಷ್ಟು ಪ್ರೀತಿ ಹೆಚ್ಚಾಗುತ್ತದೆ. ನಿಮಗೆ ಅಗೌರವ ತೋರುವ ವಿಚಾರಗಳನ್ನು ಅವರಿಗೆ ವಿವರಿಸಿ . ಅದಕ್ಕೆ ತಕ್ಕಂತೆ ನೀವೂ ನಡೆದುಕೊಳ್ಳಿ. ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವುದು ತುಂಬಾ ಮುಖ್ಯ.
ಭ್ರಮಾಲೋಕದಿಂದ ಹೊರಬನ್ನಿ:
ಚಲನಚಿತ್ರಗಳಲ್ಲಿ ತೋರಿಸುವ ರೀತಿಯ ಪ್ರಣಯವನ್ನು ನಿರೀಕ್ಷಿಸಬೇಡಿ. ನಿಮ್ಮ ಸಂಬಂಧ ಮತ್ತು ರೊಮ್ಯಾನ್ಸ್ ಬಗ್ಗೆ ವಾಸ್ತವಕ್ಕೆ ಹೊಂದುವಂತಹ ನಿರೀಕ್ಷೆಗಳನ್ನು ಇಟ್ಟುಕೊಳ್ಳಿ. ನಿಜವಾದ ಪ್ರಣಯವು ಗೌರವ, ವಿಶ್ವಾಸ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಣಾಮವಾಗಿದೆ ಎಂದು ನೀವು ತಿಳಿದಿರಬೇಕು.
ಕುಟುಂಬದ ಬಗ್ಗೆ ಹೀಯಾಳಿಕೆ ಬೇಡ:
ಎಂದಿಗೂ ಪರಸ್ಪರರ ಕುಟುಂಬವನ್ನು ಹೀಯಾಳಿಸಬೇಡಿ. ಇದು ಸಂಪೂರ್ಣ ಅಗೌರವದ ಪ್ರಮುಖ ಅಂಶವಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಕುಟುಂಬದ ಮೇಲೆ ಗೌರವ ಇದ್ದೇ ಇರುತ್ತದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅವರ ಬಗ್ಗೆ ಒಳ್ಳೆಯದು ಮಾತನಾಡಿ.
ಅಭಿಪ್ರಾಯ ವ್ಯಕ್ತಪಡಿಸಿ:
ನಿಮ್ಮ ಅನಿಸಿಕೆಗಳನ್ನು ಯಾವಾಗಲೂ ವ್ಯಕ್ತಪಡಿಸಿ. ಪ್ರಾರಂಭದಲ್ಲೇ ನೀವು ಮಾತನಾಡಲು ತುಂಬಾ ಹೆದರುತ್ತಿದ್ದರೆ, ಅದು ಭವಿಷ್ಯದಲ್ಲಿ ನಿಮಗೆ ಕಷ್ಟಕರವಾಗಿಸುತ್ತದೆ. ನಿಮ್ಮ ಸಂಬಂಧದ ಅನುಕೂಲಕ್ಕಾಗಿ ನೀವು ಹೆದರಿ ಮಾತನಾಡುವುದನ್ನು ನಿಮ್ಮ ಸಿಸ್ಟಮ್ನಿಂದ ಹೊರಹಾಕಿ. ಅನಿಸಿದ್ದು ಹೇಳಿದರೆ ಇಬ್ಬರಿಗೂ ಒಳ್ಳೆಯದು.
ಪ್ರೈವೆಸಿ ನೀಡಿ:
ಒಬ್ಬರಿಗೊಬ್ಬರು ಗುಣಮಟ್ಟದ ಸಮಯವನ್ನು ನೀಡುವುದರ ಜೊತೆಗೆ ಪರಸ್ಪರ ಪ್ರತ್ಯೇಕ ಜಾಗವನ್ನು ನೀಡುವುದು ಅಷ್ಟೇ ಮುಖ್ಯ. ಪ್ರೈವೇಟ್ ಆಗಿ ಕೆಲಸ ಮಾಡುವ ಜಾಗವನ್ನು ನೀವು ಆನಂದಿಸಬೇಕು ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಅವರ ಪ್ರೈವೆಸಿಗೆ ಅಡ್ಡಿಬರುವಂತೆ ನಡೆದುಕೊಳ್ಳಬೇಡಿ.
ಬದಲಾವಣೆ ಒಪ್ಪಿಕೊಳ್ಳಿ:
ಬದಲಾವಣೆ ಅನಿವಾರ್ಯ. ನೀವು ವ್ಯಕ್ತಿಯ ಮನಸ್ಸನ್ನು ಪ್ರೀತಿಸುತ್ತಿರಿ. ನೀವು ಪ್ರೀತಿಸಿದ ವ್ಯಕ್ತಿಯು ಸಮಯದೊಂದಿಗೆ ಬದಲಾಗುತ್ತಾರೆ ಎಂಬುದನ್ನು ಒಪ್ಪಿಕೊಳ್ಳಿ. ಬದಲಾವಣೆಯನ್ನು ನೀವು ನಿರೀಕ್ಷಿಸಬೇಕು ಮತ್ತು ಸ್ವೀಕರಿಸಬೇಕು. ಬದಲಾಗುವುದು ಮಾನವ ಸ್ವಭಾವ, ಆದರೆ ಅದನ್ನು ಆದ್ದರಿಂದ ಅದನ್ನು ನಿಮ್ಮ ವಿಚಾರಕ್ಕೆ ತರಲು ಬಿಡಬೇಡಿ.