ಬೆಂಗಳೂರು ಜು 26: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಡಿಯೂರಪ್ಪ ಅವರು ಕಣ್ಣೀರಿಟ್ಟಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಕಣ್ಣೀರಾಗಿದ್ದು, ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರಾರು?’ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ರಾಜೀನಾಮೆ ಹಿಂದೆ ಸಂತೋಷ ಕಾಣುತ್ತಿಲ್ಲ. ಬದಲಿಗೆ ಅವರ ನಿರ್ಧಾರದಲ್ಲಿ ನೋವು ಕಾಣುತ್ತಿದೆ. ಆ ನೋವು ಏನು? ಆ ನೋವು ಕೊಟ್ಟವರು ಯಾರು ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರಿಗೆ ಸ್ಪಷ್ಟಪಡಿಸಬೇಕು ಎಂದರು.
ರಾಜೀನಾಮೆ ಕುರಿತ ನಮ್ಮ ವಿಮರ್ಶೆಯನ್ನು ಮುಂದೆ ತಿಳಿಸುತ್ತೇವೆ. ಆದರೆ ಅದಕ್ಕೂ ಮೊದಲು ಮುಖ್ಯಮಂತ್ರಿಗಳು ತಮ್ಮ ನೋವಿನ ಬಗ್ಗೆ ಜನರಿಗೆ ತಿಳಿಸಬೇಕು. ಎರಡು ವರ್ಷಗಳಲ್ಲಿ ಜನರು ಕೋವಿಡ್ ಸಮಸ್ಯೆಗೆ ತುತ್ತಾಗಿದ್ದರಿಂದ ನೋವಾಯ್ತಾ? ಪಕ್ಷದ ಶಾಸಕರನ್ನು ಹೈಕಮಾಂಡ್ ನಿಯಂತ್ರಣ ಮಾಡಲಿಲ್ಲ ಎಂದು ನೋವಾಯ್ತಾ? ಎಂಬುದು ಜನರಿಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದ್ದಾರೆ.